






ಸುಂಟಿಕೊಪ್ಪ ಏ.8 NEWS DESK : ಕೊಡಗಿನ ಏಕೈಕ ಬೈತೂರಪ್ಪ ದೇವಾಲಯ ಎಂಬ ಖ್ಯಾತಿ ಪಡೆದಿರುವ ಕುಶಾಲನಗರ ತಾಲೂಕು ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮದಲ್ಲಿರುವ ಶ್ರೀ ಬೈತೂರಪ್ಪ ಮತ್ತು ಪೊವ್ವದಿ ದೇವಾಲಯದಲ್ಲಿ ಏ.14 ರಂದು ವಾರ್ಷಿಕ ಹಬ್ಬ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ವಾರ್ಷಿಕ ಹಬ್ಬದ ಪ್ರಯುಕ್ತ ಏ.11 ರಂದು ಶ್ರೀ ಬಸವೇಶ್ವರ ದೇವರ ಪರವು ನಡೆಯಲಿದ್ದು, ಅಂದು ದೇವತಕ್ಕರಾದ ಜಗ್ಗಾರಂಡ ಹ್ಯಾರಿ ಕಾರ್ಯಪ್ಪ ಅವರ ಮನೆಯಿಂದ ಎತ್ತು ಪೋರಾಟದೊಂದಿಗೆ ವಾರ್ಷಿಕೋತ್ಸವ ನಡೆಯಲಿದೆ. ಏ.14ರಂದು ಪೂರ್ವಾಹ್ನ ಗಣಪತಿ ಹೋಮದೊಂದಿಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, 12 ಗಂಟೆಗೆ ಮಹಾಪೂಜೆಯೊಂದಿಗೆ ಅನ್ನಸಂತರ್ಪಣೆ ಕೂಡ ನೆರವೇರಲಿದೆ. ಅಪರಾಹ್ನ 2 ಗಂಟೆಯಿಂದ ದೇವರ ಬಂಡಾರ ಒಪ್ಪಿಸುವುದರೊಂದಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ವಾರ್ಷಿಕ ಜಾತ್ರೆಯ ಹಿನ್ನಲೆಯಲ್ಲಿ ಏ.4 ರಂದು ಹಬ್ಬದ ಕಟ್ಟು ತೆಗೆಯಲಾಗಿದ್ದು, 11 ದಿನಗಳ ಕಾಲ ಪ್ರತಿನಿತ್ಯ ಬೆಳಗಿನಜಾವ ದೇವಾಲಯದಲ್ಲಿ ಬೊಳಕಾಟ್ ಸೇವೆ ನಡೆಯುತ್ತದೆ.