









ಮಡಿಕೇರಿ NEWS DESK ಏ.11 : ವಿವಾಹವೆಂಬುವುದು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯ ಹಂತ ಮತ್ತು ದೀರ್ಘಕಾಲದ ಅನುಬಂಧವೂ ಹೌದು. ಕುಟುಂಬಗಳ ನಡುವಿನ ಸಾಮರಸ್ಯವನ್ನು ಕಾಪಾಡುವ ಭಾವನಾತ್ಮಕ ಸಂಬಂಧ ಗಟ್ಟಿಯಾಗಬೇಕಾದರೆ ವೈವಾಹಿಕ ಜೀವನದಲ್ಲಿ ಸೂಕ್ತ ಸಂಗಾತಿಯ ಆಯ್ಕೆ ಅಗತ್ಯವೆಂದು ಕೂಡಿಗೆ ಕ್ರೀಡಾಶಾಲೆಯ ನಿವೃತ್ತ ಪ್ರಾಂಶುಪಾಲರಾದ ಕುಂತಿ ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ. ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ನಗರದ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮುದಾಯದ ವಧು-ವರರ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿವಾಹ ಎಂಬುವುದು ದೀರ್ಘಕಾಲದ ಸಂಬಂಧ, ಇದು ಪ್ರತಿಯೊಬ್ಬರ ಜೀವನದಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸವನ್ನು ಹೆಚ್ಚಿಸುತ್ತದೆ. ಕೌಟುಂಬಿಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಹೊಸ ಸಂಬಂಧಗಳನ್ನು ಸೃಷ್ಟಿ ಮಾಡಿ ಕುಟುಂಬಗಳ ನಡುವಿನ ಸಾಮರಸ್ಯವನ್ನು ಕಾಪಾಡುತ್ತದೆ. ಆದ್ದರಿಂದ ವಧು-ವರರು ಸಾಮಾಜಿಕ ಹಿನ್ನೆಲೆ, ಅಭಿರುಚಿ ಇತ್ಯಾದಿಗಳನ್ನು ತಿಳಿದುಕೊಂಡು ಉತ್ತಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವೆಂದು ತಿಳಿಸಿದರು. ಹಿಂದೆ ಕೂಡು ಕುಟುಂಬಗಳಿದ್ದು, ವಧು-ವರರನ್ನು ಹಿರಿಯರು ಆಯ್ಕೆ ಮಾಡುತ್ತಿದ್ದರು. ಇಂದಿನ ಬದಲಾದ ಕಾಲಘಟ್ಟದಲ್ಲಿ ಸಣ್ಣ ಸಣ್ಣ ಕುಟುಂಬಗಳ ರಚನೆಯಿಂದ ತಂದೆ ತಾಯಿಯರಿಗೆ ವಧು-ವರರನ್ನು ಆಯ್ಕೆ ಮಾಡುವುದು ತ್ರಾಸದಾಯಕವಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ದಲ್ಲಾಳಿಗಳು ಪೋಷಕರಿಂದ ಸುಲಿಗೆ ಮಾಡಿ, ಸುಳ್ಳು ಹೇಳಿ ಸಂಬಂಧವನ್ನು ಕುದುರಿಸುತ್ತಾರೆ. ಇದನ್ನು ತಪ್ಪಿಸಲು ಮತ್ತು ಉತ್ತಮ ಸಂಬAಧಗಳನ್ನು ಬೆಸೆಯಲು ವಧು-ವರರ ಸಮಾವೇಶ ಹೆಚ್ಚು ಸಹಕಾರಿಯಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ವಿವಾಹದ ಶ್ರೇಷ್ಠತೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಗೌಡ ಜನಾಂಗದಲ್ಲಿ ವಿಶಿಷ್ಟ ಆಚಾರ, ವಿಚಾರ, ಪದ್ಧತಿಗಳಿದ್ದು, ವಿವಾಹಕ್ಕೆ ಪ್ರತ್ಯೇಕ ಶಾಸ್ತçಗಳಿದೆ. ಇದನ್ನು ಪ್ರತಿಯೊಬ್ಬರು ಅನುಸರಿಸಬೇಕು, ಸಂಪ್ರದಾಯವನ್ನು ಉಳಿಸಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು. ವಧು-ವರರನ್ನು ಆಯ್ಕೆ ಮಾಡುವಾಗ ಹೆಚ್ಚು ಕಠಿಣ ಕ್ರಮಗಳನ್ನು ಅನುಸರಿಸದೇ ಉತ್ತಮ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಮಾತುಕತೆಗೆ ಮುಂದಾಗುವುದು ಸೂಕ್ತ ಎಂದು ಕುಂತಿ ಬೋಪಯ್ಯ ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚೊಕ್ಕಾಡಿ ಎನ್.ಅಪ್ಪಯ್ಯ ಅವರು, ಹಿರಿಯ ನಿವೃತ್ತ ನೌಕರರಿಂದ ನೌಕರರ ಸಂಘವನ್ನು ಪ್ರಾರಂಭಿಸಲಾಗಿದೆ. ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದು, ರಾಜ್ಯಾದ್ಯಂತ ಸದಸ್ಯರನ್ನು ಹೊಂದಿದೆ. ಬೆರಳೆಣಿಕೆಯ ಸದಸ್ಯರಿಂದ ಆರಂಭವಾದ ಸಂಘದಲ್ಲಿ ಇಂದು 1250ಕ್ಕಿಂತಲೂ ಹೆಚ್ಚು ಸದಸ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಸಂಘ ಹೊಂದಿದೆ ಎಂದು ತಿಳಿಸಿದರು. 2011ರಿಂದ ಸುಮಾರು ಹದಿನೈದು ವರ್ಷಗಳಿಂದ ಹಿರಿಯರಾದ ಕೋರನ ವಿಶ್ವನಾಥ್ ಅವರು ವಧು-ವರರ ಸಮಾವೇಶವನ್ನು ನಡೆಸಿಕೊಂಡು ಬರುತ್ತಿದ್ದರು. ಈ ಸಮಾವೇಶ ಹಲವು ಮಂದಿಗೆ ಸಹಕಾರಿಯಾಗಿದೆ ಎಂದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಮಾತನಾಡಿ, ವಧು-ವರರ ಸಮಾವೇಶ ಗೌಡ ಸಮಾಜಕ್ಕೆ ದೊಡ್ಡ ಕೊಡುಗೆಯಾಗಿದೆ, ಈ ನಿಟ್ಟಿನಲ್ಲಿ ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಕೋರನ ವಿಶ್ವನಾಥ್ ಅವರ ಸೇವೆ ಶ್ಲಾಘನೀಯವಾಗಿದೆ. ಸಮಾಜ ಬಾಂಧವರು ಸಮಾವೇಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಮಾತನಾಡಿ, ಕೊಡಗು ಗೌಡ ನಿವೃತ್ತ ನೌಕರರ ಸಂಘದಿAದ ಕೃಷಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಧು-ವರರ ಸಮಾವೇಶ ಉತ್ತಮ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೌಡ ಸಮಾಜದ ಹಿರಿಯರು ಹಾಗೂ ಉದ್ಯಮಿ ಅಂಬೆಕಲ್ ಕುಶಾಲಪ್ಪ ಅವರು, ಕೊಡಗು ಗೌಡ ನಿವೃತ್ತ ನೌಕರರ ಸಂಘ ಪುಣ್ಯದ ಕೆಲಸ ಮಾಡುತ್ತಿದ್ದು, ಯುವ ಸಮೂಹ ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. 10 ಕುಟಂಬ 18 ಗೋತ್ರದ ಗೌಡ ಜನಾಂಗ ಬಾಂಧವರಿಗೆ ಈ ಸಮಾವೇಶ ಅರ್ಥಪೂರ್ಣವಾಗಬೇಕು ಎಂದರು.
ಕೊಡಗು ಗೌಡ ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಕೋರನ ವಿಶ್ವನಾಥ್ ಮಾತನಾಡಿ, ಗ್ರಾಮೀಣ ಪ್ರದೇಶದ ಗೌಡ ಕುಟುಂಬಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಳೆದ 15 ವರ್ಷಗಳಿಂದ ವಧು-ವರರ ಸಮಾವೇಶವನ್ನು ನಡೆಸಿಕೊಂಡು ಬರಲಾಗುತ್ತಿದೆ. ಸಂಗಾತಿಯನ್ನು ಆಯ್ಕೆ ಮಾಡುವ ಸಂದರ್ಭ ಸಂಪೂರ್ಣ ವಿವರವನ್ನು ಪಡೆದು ಸಾಧಕ, ಬಾಧಕಗಳನ್ನು ಅರಿತು ಮುಂದಿನ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಡಗು ಗೌಡ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಸಹ ಕಾರ್ಯದರ್ಶಿ ಕಟ್ರತನ ಲಲಿತಾ ಅಯ್ಯಣ್ಣ, ಉಪಾಧ್ಯಕ್ಷ ಸೆಟ್ಟೆಜನ ದೊರೆ ಗಣಪತಿ, ನಿರ್ದೇಶಕರಾದ ದಂಬೆಕೋಡಿ ಆನಂದ ಉಪಸ್ಥಿತರಿದ್ದರು. ಉಳುವಾರನ ರೋಶನ್ ಸ್ವಾಗತಿಸಿ, ನಿರೂಪಿಸಿದರು. ಕೋಶಾಧಿಕಾರಿ ಕುಯ್ಯಮುಡಿ ಅಶ್ವಿನ್ ಕುಮಾರ್ ವಂದಿಸಿದರು. ಸಮಾವೇಶದಲ್ಲಿ 250ಕ್ಕೂ ಅಧಿಕ ಮಂದಿ ಪಾಲ್ಗೊಂಡು 90ಕ್ಕೂ ಹೆಚ್ಚು ಆಕಾಂಕ್ಷಿಗಳು ಹೆಸರು ನೋ0ದಾಯಿಸಿಕೊಂಡರು.