










ಕುಶಾಲನಗರ ಏ.13 NEWS DESK : ನದಿ ಮೂಲ, ಜಲ ಮೂಲಗಳ ಸಂರಕ್ಷಣೆಗೆ ಕಠಿಣ ಕಾನೂನಿನ ಅಗತ್ಯವಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ದೀಪಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ನಮಾಮಿ ಕಾವೇರಿ ತಂಡದ ಸಹಯೋಗದೊಂದಿಗೆ ನಡೆದ 171ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳ ನಡುವೆ ದಕ್ಷಿಣ ಭಾರತದ ಜೀವನದಿ ಕಾವೇರಿ ಬರಡಾಗುತ್ತಿದೆ. ಪ್ರಮುಖವಾಗಿ ಮೂಲದಲ್ಲಿಯೇ ಕಾವೇರಿ ನೇರವಾಗಿ ಕಲುಷಿತಗೊಂಡು ಹರಿಯುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ ಎಂದರು. ಕಾರ್ಯಕ್ರಮಗಳ ಮೂಲಕ ನದಿ ಸಂರಕ್ಷಣೆಯ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುತ್ತಿರುವ ಕಾವೇರಿ ಮಹಾ ಆರತಿ ಬಳಗದ ಜೊತೆ ಕರ್ನಾಟಕ ರಕ್ಷಣಾ ವೇದಿಕೆ ಕೈ ಜೋಡಿಸುವುದರೊಂದಿಗೆ ಸ್ವಚ್ಛ ಕಾವೇರಿ ಅಭಿಯಾನದಲ್ಲಿ ನಿರಂತರವಾಗಿ ಪಾಲ್ಗೊಳ್ಳುವುದಾಗಿ ತಿಳಿಸಿದರು. ಕಾವೇರಿ ಮಹಾ ಆರತಿ ಕಾರ್ಯಕ್ರಮದ ಉದ್ದೇಶ ಗುರಿ ಬಗ್ಗೆ ಮಾತನಾಡಿದ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಸಹಯೋಗದೊಂದಿಗೆ ನಮಾಮಿ ಕಾವೇರಿ ತಂಡದ ಮೂಲಕ ಭಾಗಮಂಡಲ ಸಂಗಮದಿಂದ ರಾಮನಾಥಪುರ ತನಕ ಕಾವೇರಿ ಹರಿಯುವ ಸುಮಾರು 25 ಕ್ಕೂ ಅಧಿಕ ಗ್ರಾಮಗಳ ನದಿ ತಟಗಳಲ್ಲಿ ಕಾವೇರಿ ನದಿಗೆ ಆರತಿ ಬೆಳಗುವ ಮೂಲಕ ನದಿ ಸ್ವಚ್ಛತೆಯ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದರು.
ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಕುಂಕುಮಾರ್ಚನೆ ,ಅಷ್ಟೋತ್ತರ ನಂತರ ಕಾವೇರಿಗೆ ಆರತಿ ಬೆಳಗಿದರು. ಇದೇ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ಮೇಲ್ವಿಚಾರಕರಾದ ಪೂರ್ಣಿಮಾ ಅವರ ವರ್ಗಾವಣೆ ಹಿನ್ನೆಲೆಯಲ್ಲಿ ಕಾವೇರಿ ಆರತಿ ಬಳಗದ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಬಳಗದ ಪ್ರಮುಖರಾದ ಚೈತನ್ಯ ಧರಣಿ ಕುಶಾಲನಗರ ತಾಲೂಕು ಕರವೇ ಘಟಕದ ಅಧ್ಯಕ್ಷ ಬಿಜೆ ಅಣ್ಣಯ್ಯ ಕಾರ್ಯದರ್ಶಿ ಆರ್ ಕುಮಾರ್ ಡಿ ಆರ್ ಯೋಗೀಶ್ ಮುರಳಿ ಸಂದೀಪ್ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳು ಕಾರ್ಯಕರ್ತರು ಬಳಗದ ಸದಸ್ಯರು ಇದ್ದರು. ಹುಣ್ಣಿಮೆ ಅಂಗವಾಗಿ ನಮಾಮಿ ಕಾವೇರಿ ತಂಡದ ಸದಸ್ಯರಿಂದ ಕೊಡಗು ಜಿಲ್ಲೆಯ ಭಾಗಮಂಡಲ ತ್ರಿವೇಣಿ ಸಂಗಮ, ಕುಂದಚೇರಿ, ಕರಡಿಗೋಡು, ಗುಹ್ಯ, ಗೂಡ್ಗದ್ದೆ ಮುಳ್ಳುಸೋಗೆ, ಗುಮ್ಮನ ಕೊಲ್ಲಿ, ಕೂಡ್ಲೂರು, ನೆರೆಯ ದೊಡ್ಡ ಹೊಸೂರು, ಚಿಕ್ಕ ಹೊಸೂರು, ಕೊಪ್ಪ ಗ್ರಾಮಗಳು ಸೇರಿದಂತೆ 20 ಕ್ಕೂ ಅಧಿಕ ಕಡೆಗಳಲ್ಲಿ ಏಕಕಾಲದಲ್ಲಿ ಕಾವೇರಿ ನದಿಗೆ ಮಹಾ ಆರತಿ ಬೆಳಗುವ ಕಾರ್ಯಕ್ರಮಗಳು ನಡೆದವು.