










ಮಡಿಕೇರಿ ಏ.13 NEWS DESK : ಕೊಡಗು ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟ(ಕೊಡ್ಯಾಕ್)ದ ಸಮಾಗಮ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್, ಪ್ರೇರಣಾದಾಯಕ ಮಾತುಗಳನ್ನಾಡಿ, ಶಾಲೆಯ ಇತ್ತೀಚಿನ ಶೈಕ್ಷಣಿಕ ಸಾಧನೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಗಳ ಕುರಿತು ಹಳೇ ವಿದ್ಯಾರ್ಥಿಗಳ ಸಂಘಕ್ಕೆ ಮಾಹಿತಿ ನೀಡಿದರು. ಸೈನಿಕ ಶಾಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಹಸ ಪ್ರಜ್ಞೆ ಹಾಗೂ ನೈತಿಕ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿರುತ್ತಾರೆ ಎಂದು ಹೇಳಿದರು. ಈ ಶಾಲೆಯಲ್ಲಿ ಕಳೆಯುವ ಪ್ರತಿ ಕ್ಷಣವೂ ಅವರಲ್ಲಿ ಸ್ಥೈರ್ಯ ಹಾಗೂ ಸಹನಶೀಲತೆಯ ಗುಣವನ್ನು ಬೆಳೆಸುತ್ತದೆ. ಈ ಗುಣಗಳೇ ಅವರ ಬದುಕಿಗೆ ಆದರ್ಶಪ್ರಾಯವಾದ ವ್ಯಕ್ತಿತ್ವವನ್ನು ರೂಪಿಸುತ್ತವೆ. ಹಳೆಯ ವಿದ್ಯಾರ್ಥಿಗಳು ಬಿಟ್ಟುಹೋಗಿರುವ ಪರಂಪರೆ ಹಾಗೂ ಸಹೋದರತ್ವ ಭಾವನೆ ಇಂದಿನ ವಿದ್ಯಾರ್ಥಿಗಳ ಬದುಕಿಗೆ ಇಂದಿಗೂ ಪ್ರೇರಣೆಯಾಗಿ ಉಳಿದಿದೆ ಎಂದ ಅವರು, ಸಹೋದರತ್ವದ ಭಾವನೆಯೇ ಈ ಶಾಲೆಯ ಬಲವಾದ ಆಧಾರ ಸ್ತಂಭವೆಂದು ತಿಳಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿ ಮಹೇಶ್ ಹಂಚಿನಮನಿ ಮಾತನಾಡಿ, ಹಳೇ ವಿದ್ಯಾರ್ಥಿಗಳ ಸಂಘದ ದೃಷ್ಟಿಕೋನ, ಮೌಲ್ಯಗಳು ಮತ್ತು ಪ್ರಸ್ತುತ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸಮಾಜಮುಖಿ ಚಟುವಟಿಕೆಗಳ ಕುರಿತು ವಿವರಿಸಿ, ಪ್ರಾತ್ಯಕ್ಷಿಕೆಯನ್ನು ನೀಡಿದರು. ಯುವ ವಿದ್ಯಾರ್ಥಿಗಳು ತಮ್ಮ ಪರಂಪರೆಯನ್ನು ಉಳಿಸಿಕೊಂಡು, ಶಾಲೆಯೊಂದಿಗೆ ಭವಿಷ್ಯದ ದಿನಗಳಲ್ಲಿಯೂ ಸಹ ನಿರಂತರ ಸಂಪರ್ಕದಲ್ಲಿರುವಂತೆ ಸಲಹೆ ನೀಡಿದರು. ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮೊಹಮ್ಮದ್ ಶಫಿವುಲ್ಲಾ ಮಾತನಾಡಿ, ಶಾಲೆಯ ಬೆಳವಣಿಗೆಗೆ ಹಳೆ ವಿದ್ಯಾರ್ಥಿಗಳ ಸಂಘದ ಬದ್ಧತೆಯನ್ನು ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಶಾಲೆಯ ಪ್ರಥಮ ಮಹಿಳೆ ದಿವ್ಯಾ ಸಿಂಗ್, ಶಾಲಾ ವೈದ್ಯಾಧಿಕಾರಿ ಡಾ.ಚಿನ್ಮಯಿ, ಹಿರಿಯ ಶಿಕ್ಷಕರಾದ ಎನ್.ವಿಬಿನ್ ಕುಮಾರ್, ಮಾಜಿ ಶಿಕ್ಷಕರಾದ ಆರೋಕ್ಯ ರಾಜ್, ಎಸ್. ಸುರ್ಯನಾರಾಯಣ, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ, ಎನ್.ಸಿ.ಸಿ ಸಿಬ್ಬಂದಿವರ್ಗ, ದೈಹಿಕ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸುಮಾರು 115ಕ್ಕೂ ಹೆಚ್ಚು ಉತ್ಸಾಹಿ ಹಳೇ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೆಡೆಟ್ ಹರ್ಷರಾಜ್ ಸ್ವಾಗತಿಸಿದರು. ಅದಿಪ್ ವಂದಿಸಿದರು. ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಮೂಹ ಗೀತೆ ಮತ್ತು ಸಮೂಹ ನೃತ್ಯವು ಸಭಿಕರನ್ನು ಮಂತ್ರಮುಗ್ಧಗೊಳಿಸಿತು.
ಪಂದ್ಯಾವಳಿ :: ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ನಡುವೆ ಸ್ನೇಹಪೂರ್ವಕವಾಗಿ ಪುಟ್ಬಾಲ್ ಹಾಗೂ ಹಾಕಿ ಪಂದ್ಯ ನಡೆಯಿತು. ಪುಟ್ಬಾಲ್ ಪಂದ್ಯದಲ್ಲಿ ಶಾಲೆಯ ವಿದ್ಯಾರ್ಥಿಗಳು 4-2 ಗೋಲುಗಳಿಂದ ವಿಜೇತರಾದರೆ, ಹಾಕಿ ಪಂದ್ಯಾವಳಿಯಲ್ಲಿ ಹಳೇ ವಿದ್ಯಾರ್ಥಿಗಳ ತಂಡ 2-1 ಗೋಲುಗಳಿಂದ ವಿಜೇತರಾಗಿ ಗಮನ ಸೆಳೆದರು.
ಬಹುಮಾನ ವಿತರಣೆ :: ಅಂತರ ನಿಲಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಪ್ರಥಮ ಸ್ಥಾನಗಳಿಸಿದ ಮೆನನ್ ನಿಲಯಕ್ಕೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ವಿತರಿಸಲಾಯಿತು.
2024-25ನೇ ಶೈಕ್ಷಣಿಕ ಸಾಲಿನಲ್ಲಿ ಸಾಧನೆಗೈದ ಕಾರ್ಯಪ್ಪ ನಿಲಯಕ್ಕೆ ಅತ್ಯುತ್ತಮ ನಿಲಯ (ಕಾಕ್ ಹೌಸ್) ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು. ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಹಳೆಯ ವಿದ್ಯಾರ್ಥಿಗಳಿಗೆ ಸಂಘದ ಗುರುತಿನ ಪತ್ರವನ್ನು ನೀಡಲಾಯಿತು.