









ಮಡಿಕೇರಿ NEWS DESK ಏ.13 : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆದ ಕೊಡವ ಕ್ರಿಕೆಟ್ ಲೆದರ್‌ಬಾಲ್ ಪ್ರೀಮಿಯರ್ ಲೀಗ್ ಸೀಸನ್-2 ರ ಫೈನಲ್ ಪಂದ್ಯದಲ್ಲಿ ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ತಂಡ ಭರ್ಜರಿ ಗೆಲುವು ದಾಖಲಿಸಿತು. ಎದುರಾಳಿ ತಂಡ ಟೀಮ್ ಲಿವರೇಜ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಟೀಮ್ ವೆಸ್ಟರ್ನ್ ಘಾಟ್ ವಾರಿಯರ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಗಳನ್ನು ಸೇರಿಸಿತು. ಇದನ್ನು ಬೆನ್ನಟ್ಟಿದ ಟೀಮ್ ಲಿವರೇಜ್ ತಂಡ 17.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 96 ರನ್ ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತು. ವೆಸ್ಟರ್ನ್ ಘಾಟ್ ವಾರಿಯರ್ಸ್ ತಂಡದ ಅಪ್ಪನೆರವಂಡ ಲೋಚನ್ ಅಪ್ಪಣ್ಣ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಸೀಸನ್-2ರ ವಿಜೇತರಿಗೆ ಪ್ರಥಮ ಬಹುಮಾನ 2 ಲಕ್ಷ, ದ್ವಿತೀಯ 1 ಲಕ್ಷ, ತೃತೀಯ 50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಯಿತು. ಕೊಡವ ರೈಸಿಂಗ್ ಸ್ಟಾರ್ಸ್ ತಂಡ ತೃತೀಯ ಮತ್ತು ಕೂರ್ಗ್ ಯುನೈಟೆಡ್ ತಂಡ 4ನೇ ಬಹುಮಾನವನ್ನು ಪಡೆದುಕೊಂಡವು. ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತೀತಮಾಡ ಡೆಲ್ವಿನ್, ಅತ್ಯುತ್ತಮ ಆಲ್‌ರೌಂಡರ್ ಚೋನಿರ ಅಯ್ಯಪ್ಪ, ಅತ್ಯುತ್ತಮ ವಿಕೆಟ್ ಕೀಪರ್ ಶಾಂತೆಯಂಡ ಲೂಥನ್, ಅತ್ಯುತ್ತಮ ಬ್ಯಾಟ್ಸ್ಮನ್ ಮೊಳ್ಳೇರ ಧ್ಯಾನ್ ಅಯ್ಯಪ್ಪ, ಅತ್ಯುತ್ತಮ ಬೌಲರ್ ಬೊಳ್ಳೇರ ದಿಶಾನ್ ಕುಟ್ಟಯ್ಯ, ಅತಿ ಹೆಚ್ಚು ವಿಕೆಟ್ ಪಡೆದವರು ನೂರೇರ ಶರಣ್ ಸೋಮಣ್ಣ, ಅಂತಿಮ ಪಂದ್ಯದ ಪುರುಷೋತ್ತಮ ಅಪ್ಪನೆರವಂಡ ಲೋಚನ್ ಅಪ್ಪಣ್ಣ, ಅತ್ಯುತ್ತಮ ಫೀಲ್ಡರ್ ಮಣವಟ್ಟಿರ ಥರನ್, ಅತ್ಯುತ್ತಮ ಕ್ಯಾಚ್ ಮುಕ್ಕಾಟೀರ ದೇವ್ ಚೆಂಗಪ್ಪ, ಉದಯೋನ್ಮುಖ ಆಟಗಾರ ಕೇಳೇಟ್ಟಿರ ಸ್ಕಂದ, ಶ್ರೇಷ್ಠ ಮಹಿಳಾ ಆಟಗಾರರು ಪ್ರಶಸ್ತಿಯನ್ನು ಕಂಬೀರಂಡ ಹನ ಹಾಗೂ ಕಾಯಪಂಡ ಯಾನ ಪಡೆದುಕೊಂಡರು. ಹಿರಿಯ ಆಟಗಾರರಾಗಿ ಗಮನ ಸೆಳೆದ ಮಚ್ಚಮಾಡ ಬೋಪಣ್ಣ ಅವರನ್ನು ಗೌರವಿಸಲಾಯಿತು. 13 ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ 10 ಪ್ರಾಂಚೈಸಿ ತಂಡಗಳ 175ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದರು.