
ಮಡಿಕೇರಿ ಏ.14 NEWS DESK : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಯೋಜಿತ ಪ್ರತಿಷ್ಠಿತ ಯುವ ವಿಜ್ಞಾನಿ ಕಾರ್ಯಕ್ರಮ(ಯುವಿಕಾ)ಗೆ ಕೊಡಗು ಸೈನಿಕ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೆಡೆಟ್ ಅತುಲ್ ಕುಮಾರ್ ಆಯ್ಕೆಯಾಗಿದ್ದಾರೆ.
ಮೇ 19 ರಿಂದ ಮೇ 30ರವರೆಗೆ ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರ (ಯು ಆರ್ ಎಸ್ ಸಿ)ದಲ್ಲಿ ಕಾರ್ಯಕ್ರಮ ನಡೆಯಲಿದೆ.
ವಿದ್ಯಾರ್ಥಿಯ ಸಾಧನೆಯನ್ನು ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್‍ಜೀತ್ ಸಿಂಗ್, ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪ್ರಕಾಶ್ ರಾವ್ ಮತ್ತು ಉಪಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ ಪ್ರಶಂಸಿದರು. ಈ ಸಂದರ್ಭ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್‍ಜೀತ್ ಸಿಂಗ್, ಈ ಆಯ್ಕೆಯು ಸೈನಿಕ ಶಾಲೆಯು ಹೆಮ್ಮೆಪಡುವ ಕ್ಷಣವಾಗಿದ್ದು. ಅತುಲ್ ಕುಮಾರ್ ಅವರು ಯೂವಿಕಾ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದರೊಂದಿಗೆ ಶಾಲೆಯ ಗೌರವವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ ಎಂದರು. ಅತುಲ್ ಕುಮಾರ್‍ಗೆ ಲಭಿಸಿರುವ ಈ ಸುವರ್ಣಾವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು, ಯುವ ವಿಜ್ಞಾನಿಯಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂತಸ ವ್ಯಕ್ತಪಡಿಸಿದ ಅವರು, ಈ ಸಾಧನೆಯು ಇತರೆ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ಹಾರೈಸಿದರು. ಈ ಐತಿಹಾಸಿಕ ಸಾಧನೆ, ಶಾಲೆಯ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿ ಉಳಿಯಲಿದೆ ಎಂದು ತಿಳಿಸಿದರು. ಯುವ ವಿಜ್ಞಾನಿ ಕಾರ್ಯಕ್ರಮವು `ಯುವಿಕಾ’ ಎಂಬ ಹೆಸರಿನಲ್ಲಿ ಪ್ರಸಿದ್ಧಿಯಲ್ಲಿದ್ದು, ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಆಳವಾದ ಜ್ಞಾನ, ಇಸ್ರೋದ ಹಿರಿಯ ವಿಜ್ಞಾನಿಗಳೊಂದಿಗೆ ಸಂವಾದ, ಹಸ್ತ ಕೌಶಲ್ಯದ ಚಟುವಟಿಕೆಗಳು, ಪ್ರಯೋಗಾಲಯ ಭೇಟಿಗಳು ಹಾಗೂ ಪ್ರದರ್ಶನಗಳು ಒಳಗೊಂಡಿದೆ.









