









ಮಡಿಕೇರಿ ಏ.14 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಸಭೆ ಕಾಲೇಜಿನ ನ್ಯಾಕ್ ಕೊಠಡಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಲೇಜಿನ ಅಭಿವೃದ್ಧಿ ಹಾಗೂ ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ನಡೆಯಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ.ರಾಘವ ಮಾತನಾಡಿ, ಕಾಲೇಜು ಈಗಾಗಲೇ 75 ವರ್ಷಗಳನ್ನು ಪೂರೈಸಿದ್ದು, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ವಿದ್ಯಾರ್ಥಿಗಳಿಗಾಗಿ ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಕಾಲೇಜಿನ ಅಭಿವೃದ್ಧಿಗೂ ಬಹಳಷ್ಟು ಸಹಕಾರ ನೀಡಿದ್ದಾರೆ. ಕಾಲೇಜಿನ ಬೆಳವಣಿಗೆಗೆ ಹಳೆಯ ವಿದ್ಯಾರ್ಥಿಗಳ ಕೊಡುಗೆ ಬಹಳ ಮುಖ್ಯವಾಗುತ್ತದೆ ಎಂದರು. ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕಾಲೇಜನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದು ನಮ್ಮ ಮುಖ್ಯ ಉದ್ದೇಶ. ಕಾಲೇಜಿಗೆ ಅಗತ್ಯವಿರುವ ಮೂಲ ಸೌಕರ್ಯಗಳು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ದೊರೆಯಬೇಕು. ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳು ಕಾಲೇಜಿನೊಂದಿಗೆ ನಿಕಟ ಒಡನಾಟ ಹೊಂದಬೇಕು. ಹಳೆ ವಿದ್ಯಾರ್ಥಿ ಸಂಘದ ಸದಸ್ಯತ್ವ ಪಡೆದುಕೊಂಡು ನಮ್ಮೊಂದಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಆ ನಿಟ್ಟಿನಲ್ಲಿ ಸದಸ್ಯತ್ವವನ್ನು ಹೆಚ್ಚಿಸಲು ಶ್ರಮಿಸುತ್ತಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಗುರುವಂದನಾ ಕಾರ್ಯಕ್ರಮ ಆಯೋಜಿಸುವ ಯೋಜನೆ ಇದೆ. ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಉಪನ್ಯಾಸಕರನ್ನು ಒಂದೆಡೆ ಸೇರಿಸಿ ವಿಶೇಷವಾಗಿ ಗೌರವಿಸುವ ಕಾರ್ಯಕ್ರಮವನ್ನು ಕಾಲೇಜಿನ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ಉಪಾಧ್ಯಕ್ಷ ಬೊಟ್ಟಂಗಡ ಗಣಪತಿ, ನಿರ್ದೇಶಕರಾದ ಕಿಶೋರ್ ರೈ ಕತ್ತಲೆಕಾಡು, ಕೇಲೇಟಿರ ದೇವಯ್ಯ, ಕೋಚನ ದಿಶಾಂತ್, ಆದರ್ಶ್ ಅದ್ಕಲೇಗಾರ್, ಸಬ್ಬಂಡ್ರ ಜಗದೀಶ್, ಐಚಂಡ ರಶ್ಮಿ ಮೇದಪ್ಪ, ಪೇರಿಯಂಡ ಯಶೋಧ, ಕರವಂಡ ಸೀಮಾ ಗಣಪತಿ, ಪೇರಿಯಂಡ ಜಯಂತಿ, ತೆನ್ನೀರ ಟೀನಾ ಚೆಂಗಪ್ಪ, ಖುರ್ಷಿದಾ ಭಾನು, ಎಸ್.ಆರ್ ವತ್ಸಲಾ, ಪೆಬ್ಬಟ್ಟಿರ ಶೀತಲ್, ಚರಣ್ ಬಲ್ಯದ ಹಾಜರಿದ್ದರು.
ಕಾಲೇಜು ಮುಚ್ಚುವುದಿಲ್ಲ :: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಇನ್ನು ಕಾರ್ಯನಿರ್ವಹಿಸುವುದಿಲ್ಲ. ಇಲ್ಲಿನ ಕೆಲವು ವಿಭಾಗಗಳು ಮುಚ್ಚಲ್ಪಡುತ್ತವೆ ಎಂಬಿತ್ಯಾದಿ ಸುಳ್ಳು ಮಾಹಿತಿಯನ್ನು ಕೆಲವರು ಹರಿಯಬಿಡುತ್ತಿರುವ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು. ಈ ರೀತಿಯ ಯಾವುದೇ ಬೆಳವಣಿಗೆ ಆಗಿಲ್ಲ. ಯಾವುದೇ ವಿಭಾಗವನ್ನು ಮುಚ್ಚುವ ಪ್ರಸ್ತಾಪವೂ ಇಲ್ಲ. ಈ ಹಿಂದಿನಂತೆ ಇರುವ ಎಲ್ಲಾ ವಿಭಾಗಗಳು ಕಾರ್ಯನಿರ್ವಹಿಸುತ್ತದೆ. ತಪ್ಪು ಸಂದೇಶ ಹರಿಯಬಿಟ್ಟು ಕಾಲೇಜಿನ ಅಭಿವೃದ್ಧಿ ಹಾಗೂ ಘನತೆಗೆ ಯಾರೂ ಧಕ್ಕೆ ಉಂಟುಮಾಡಬಾರದು. ಹಾಗೂ ಸಾರ್ವಜನಿಕರು ಇಂಥ ಯಾವುದೇ ಊಹಾಪೋಹದ ವಿಚಾರಗಳಿಗೆ ಕಿವಿಗೊಡದಂತೆ ಹಳೆ ವಿದ್ಯಾರ್ಥಿ ಸಂಘ ವಿನಂತಿಸಿಕೊಂಡಿದೆ.