
ಮಡಿಕೇರಿ NEWS DESK ಏ.20 : ಗೌಡ ಪ್ರೀಮಿಯರ್ ಲೀಗ್ ಜಿಪಿಎಲ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮಡಿಕೇರಿಯಲ್ಲಿ ಉದ್ಘಾಟನೆಗೊಂಡಿದ್ದು, 10 ತಂಡಗಳ ನಡುವೆ ಪ್ರಶಸ್ತಿಗಾಗಿ ಸೆಣಸಾಟ ನಡೆಯಲಿದೆ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ಒಗ್ಗಟ್ಟನ್ನು ಕಾಯ್ದುಕೊಳ್ಳುವಂತೆ ಕರೆ ನೀಡಿದರು. ಕೊಡಗು ಗೌಡ ಯುವ ವೇದಿಕೆ ವತಿಯಿಂದ 15 ದಿನಗಳ ಕಾಲ ನಡೆಯುವ ‘ಗೌಡ ಪ್ರೀಮಿಯರ್ ಲೀಗ್'(ಜಿಪಿಎಲ್) ಲೆದರ್ ಬಾಲ್ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ವಿದ್ಯುಕ್ತ ಚಾಲನೆ ದೊರೆಯಿತು. ಕೆ.ಜಿ.ಬೋಪಯ್ಯ ಅವರು ಮಾತನಾಡಿ, ಗೌಡ ಜನಾಂಗ ಬಾಂಧವರು ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಒಗ್ಗಟ್ಟನ್ನು ಕಾಯ್ದುಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು. ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಕ್ರೀಡಾ ಪ್ರತಿಭೆೆಗಳಿದ್ದು, ಪ್ರತಿಭಾವಂತರನ್ನು ಗುರುತಿಸಿ, ಅವರಿಗೆ ಅಗತ್ಯ ಅವಕಾಶಗಳನ್ನು ಕಲ್ಪಿಸಲು ಈ ರೀತಿಯ ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು. ಪಂದ್ಯಾಟಕ್ಕೆ ಚಾಲನೆ ನೀಡಿದ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಕೊಡಗಿನಲ್ಲಿ ವಿವಿಧ ಜನಾಂಗಗಳ ಹಲವು ಕ್ರೀಡಾಕೂಟ ಆಯೋಜನೆಯಾಗುತ್ತಿದೆ. ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ. ಎಲ್ಲರೂ ಒಗ್ಗಟ್ಟಿನಿಂದ, ಪರಸ್ಪರ ವಿಶ್ವಾಸದಿಂದ ಮುನ್ನಡೆದರೆ ಜಿಲ್ಲೆಯ ಪ್ರಗತಿ ಸಾಧ್ಯವೆಂದು ಅಭಿಪ್ರಾಯಪಟ್ಟರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಮಾತನಾಡಿ, ವಿವಿಧೆಡೆಗಳಲ್ಲಿ ನೆಲೆಸಿರುವ ಗೌಡ ಜನಾಂಗ ಬಾಂಧವರನ್ನು ಕ್ರೀಡಾ ಚಟುವಟಿಕೆಗಳ ಮೂಲಕ ಒಂದೆಡೆ ಸೇರಿಸುವ ಇಂತಹ ಪ್ರಯತ್ನ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, ಗೌಡ ಜನಾಂಗ ಬಾಂಧವರ ಕ್ರಿಕೆಟ್ ಹಬ್ಬಕ್ಕೆ ಸರ್ಕಾರ ಅಗತ್ಯ ಆರ್ಥಿಕ ನೆರವನ್ನು ಒದಗಿಸಲು ಮುಂದಾಗಬೇಕೆAದು ಮನವಿ ಮಾಡಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಮಾಜಿ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮಾತನಾಡಿ, ಗೌಡ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಆಯೋಜನೆಗೆ ಸಹಕಾರಿಯಾಗುವಂತೆ ಜಿಲ್ಲೆಯ ಶಾಸಕರ ಮೂಲಕ ಸರ್ಕಾರದಿಂದ ಅಗತ್ಯ ಅನುದಾನ ದೊರಕಿಸಿಕೊಡಲು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮುಂದಾಗಬೇಕೆಂದು ಮನವಿ ಮಾಡಿದರು.
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಹಾಗೂ ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಜಿ.ಮೋಹನ್ ಮಾತನಾಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಗೌಡ ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ವಹಿಸಿದ್ದರು. ವೇದಿಕೆಯಲ್ಲಿ ದಕ್ಷಿಣ ಕನ್ನಡ, ಕೊಡಗು ಸಮಾಜಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧು ಸೋಮಣ್ಣ ಹಾಗೂ ನಗರಸಭಾ ಸದಸ್ಯ ಎಸ್.ಸಿ.ಸತೀಶ್ ಉಪಸ್ಥಿತರಿದ್ದರು. ಬಾಳಾಡಿ ಪಾವನಿ ಮನೋಜ್ ಪ್ರಾರ್ಥಿಸಿ, ವೇದಿಕೆಯ ಶಿಸ್ತು ಸಮಿತಿಯ ಅಧ್ಯಕ್ಷ ನವೀನ್ ದೇರಳ ಸ್ವಾಗತಿಸಿದರು. ಯುವ ವೇದಿಕೆ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌಡ ಯುವ ವೇದಿಕೆ ಗೌರವ ಸಲಹೆಗಾರ ಕಟ್ಟೆಮನೆ ಸೋನಾಜಿತ್ ನಿರೂಪಿಸಿ, ಆಹಾರ ಸಮಿತಿಯ ಅಧ್ಯಕ್ಷ ಪರಿಚನ ಸತೀಶ್ ವಂದಿಸಿದರು. ಇಂದಿನಿಂದ ಮೇ 4ರ ವರೆಗೆ ಗೌಡ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿಗಾಗಿ 10 ಪ್ರಾಂಚೈಸಿ ತಂಡಗಳ ನಡುವೆ ಪೈಪೋಟಿ ನಡೆಯಲಿದೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಕ್ಕಲಿಗ ಗೌಡ ಸಮುದಾಯದ ಮಂದಿಗಾಗಿ ಕ್ರೀಡಾಕೂಟ ನಡೆಯುತ್ತಿದೆ.









