
ಮಡಿಕೇರಿ NEWS DESK ಆ.1 : ಕೊಡಗು ಜಿಲ್ಲೆಯಲ್ಲಿ ಮಳೆ ತೀವ್ರತೆಯನ್ನು ಪಡೆದುಕೊಂಡಿದ್ದು, ವಿವಿಧೆಡೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಬರೆ ಕುಸಿತ, ರಸ್ತೆ ಸಂಪರ್ಕ ಕಡಿತ, ಮನೆಗಳಿಗೆ ಹಾನಿ, ಗಾಳಿ, ಮೈಕೊರೆಯುವ ಚಳಿಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾವೇರಿ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆೆ. ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿ ಪ್ರವಾಹದ ನೀರು ರಸ್ತೆಗಳನ್ನು ಆವರಿಸಿದೆ. ಉದ್ಯಾನವನ, ಭಾಗಮಂಡಲ-ನಾಪೋಕ್ಲು ಹಳೇ ರಸ್ತೆಯ ಮೇಲೆ ನೀರು ಹರಿಯಲಾರಂಭಿಸಿದೆ. ಈ ಭಾಗದ ಜನರು ಸಂಚಾರಕ್ಕೆ ಮೇಲು ಸೇತುವೆಯನ್ನು ಅವಲಂಬಿಸಿದ್ದಾರೆ. ಮದೆ ಗ್ರಾಮದ ಕರ್ತೋಜೆ ಬಳಿ ಮಂಗಳೂರು – ಮಡಿಕೇರಿ ಮುಖ್ಯ ರಸ್ತೆಯ ಮೇಲೆ ಬಂಡೆ ಕಲ್ಲು ಉರುಳಿ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕಲ್ಲನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಕಾವೇರಿ ಕ್ಷೇತ್ರದಲ್ಲಿ ಕಳೆದ ಒಂದು ದಿನದ ಅವಧಿಯಲ್ಲಿ 6 ಇಂಚಿಗೂ ಅಧಿಕ ಮಳೆ ದಾಖಲಾಗಿದೆ. ಭಾಗಮಂಡಲ ಮತ್ತು ತಲಕಾವೇರಿ ವ್ಯಾಪ್ತಿಯಲ್ಲಿ ಗಾಳಿ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ನಾಪೋಕ್ಲು ಸಮೀಪದ ಪೇರೂರು ಗ್ರಾಮದ ನಿವಾಸಿ ಬಿ.ಮೊಣ್ಣಪ್ಪ ಅವರ ಮನೆಯ ಒಂದು ಪಾರ್ಶ್ವ ಗಾಳಿ ಮಳೆಗೆ ಕುಸಿದು ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ದಕ್ಷಿಣ ಕೊಡಗಿನ ಶ್ರೀಮಂಗಲ ಹೋಬಳಿಯ ಟಿ.ಶೆಟ್ಟಿಗೇರಿ ಗ್ರಾಮದ ಹೆಚ್.ಆರ್.ಮಂಜುಳ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸಮೀಪದ ಮದೆ ಗ್ರಾಮದ ಕೊಪ್ಪಡ್ಕ ರಾಮಯ್ಯ ಅವರ ಮನೆಯ ಹಿಂಬದಿಯ ಬರೆ ಕುಸಿದು, ಭಾರೀ ಪ್ರಮಾಣದ ಮಣ್ಣು ಮನೆಯ ಗೋಡೆಗಳನ್ನು ಆವರಿಸಿ ಆತಂಕವನ್ನು ಸೃಷ್ಟಿಸಿದೆ. ಮಡಿಕೇರಿ ತಾಲ್ಲೂಕಿನ ಎರಡನೇ ಮೊಣ್ಣಂಗೇರಿ ಗ್ರಾಮದ ಸಂಪರ್ಕ ರಸ್ತೆಯ ಪಾರ್ಶ್ವದ ಬರೆ ಕುಸಿದು ರಸ್ತೆ ಸಂಚಾರಕ್ಕೆ ತೊಡಕುಂಟಾಗಿತ್ತು. ನಂತರ ರಸ್ತೆಯಲ್ಲಿ ಆವರಿಸಿದ್ದ ಮಣ್ಣನ್ನು ತೆರವುಗೊಳಿಸಲಾಯಿತು. ಭಾಗಮಂಡಲ ಸಮೀಪದ ಕುಂದಚೇರಿ ಕಲ್ಲುತಿರಿಕೆ ದೇವಸ್ಥಾನ ಬಳಿ ಬರೆಕುಸಿತ ಉಂಟಾಗಿದ್ದು, ಅಪಾಯಕಾರಿ ಸ್ಥಿತಿಯಲ್ಲಿ ವಿದ್ಯುತ್ ಕಂಬಗಳು ಬಾಗಿ ಸಂಪರ್ಕ ಕಡಿತಗೊಂಡಿದೆ. ಕುಂದಚೇರಿ ಗ್ರಾಮದ ಕಲ್ಲು ತಿರಿಕೆ ದೇವಸ್ಥಾನ ಬಳಿಯಲ್ಲಿ ಬರೆ ಕುಸಿದಿದ್ದು, ಸಂಪರ್ಕ ರಸ್ತೆ ಮುಚ್ಚಲ್ಪಟ್ಟಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಮಳೆ, ಮಂಜು ಮತ್ತು ಕುಳಿರ್ಗಾಳಿ ನಗರದ ಜನತೆಯನ್ನು ಹೈರಾಣಾಗಿಸಿದೆ. ಹಾರಂಗಿ ಅಣೆಕಟ್ಟೆಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ 19 ಸಾವಿರಕ್ಕು ಹೆಚ್ಚಿನ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಇದರಿಂದ ಅಣೆಕಟ್ಟೆಯ ಕೆಳಭಾಗ ಪ್ರವಾಹವೇರ್ಪಟ್ಟಿದ್ದು, ರುದ್ರ ರಮಣೀಯ ದೃಶ್ಯ ಅನಾವರಣಗೊಂಡಿದೆ.









