
ವಿರಾಜಪೇಟೆ ಏ.22 NEWS DESK : ಬೆಟೋಳಿ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾ ಚಂಡಿಕಾ ಹೋಮವು ಶ್ರದ್ಧಾಭಕ್ತಿಯಿಂದ ಜರುಗಿತು. ಪ್ರತಿಷ್ಠಾ ಮಹೋತ್ಸವದ ಹಿಂದಿನ ದಿವಸ ಪುರೋಹಿತರು ಪಾರಾಯಣವನ್ನು ಮಾಡಿದರು. ಮುಂಜಾನೆ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ನಾಗ, ಶ್ರೀ ವನದುರ್ಗಾ ದೇವರುಗಳಿಗೆ ಪ್ರಾರ್ಥನೆಯನ್ನು ಸಲ್ಲಿಸುವುದರ ಮೂಲಕ ಧಾರ್ಮಿಕ ಕಾರ್ಯಗಳನ್ನು ಆರಂಭಿಸಲಾಯಿತು. ಮಹಾಗಣಪತಿ ಹೋಮದ ನಂತರ ಪುರೋಹಿತರು ಸಂಕಲ್ಪ ಮಾಡಿದರು. ಶ್ರೀ ಲಕ್ಷ್ಮಿ ಸತ್ಯನಾರಾಯಣ ಪೂಜೆಯು ಶಾಸ್ತ್ರೋಕ್ತವಾಗಿ ನಡೆಯಿತು. ಅರ್ಚಕರು ಮಹಾ ಚಂಡಿಕಾ ಹವನದ ಪ್ರಯುಕ್ತ ಸಂಕಲ್ಪ ಪೂಜೆಯನ್ನು ಮಾಡಿ ಪ್ರಾರ್ಥಿಸಿದರು. ಶ್ರೀ ಲಕ್ಷ್ಮಿ ಸತ್ಯನಾರಾಯಣ ಸ್ವಾಮಿಗೆ ಹಾಗೂ ಶ್ರೀ ದೇವಿಗೆ ಅಲಂಕಾರ ಸೇವೆ, ಅಷ್ಟೋತ್ತರ ಪಠಣ, ಕುಂಕುಮಾರ್ಚನೆ, ನೈವೇದ್ಯ ಅಭಿಷೇಕ ಸೇವೆಗಳು ನಡೆದವು. ಮಹಾ ಚಂಡಿಕಾ ಯಾಗದ ಸಂದರ್ಭ ಅಷ್ಟಾ ವದನ ಸೇವೆ ನಡೆದು ಚಂಡೆ ಬಳಗದವರಿಂದ ಚಂಡೆ ಸೇವೆ, ಭರತನಾಟ್ಯ, ಭಜನೆ, ದೇವಿಯ ಶ್ಲೋಕ ಪಠಣ ಸೇವೆಗಳು ನಡೆದವು. ಅರ್ಚಕರು ಶ್ರೀ ಸತ್ಯನಾರಾಯಣ ಸ್ವಾಮಿಗೆ ಮಹಾ ಮಂಗಳಾರತಿ ಹಾಗೂ ಚಂಡಿಕಾ ಹೋಮದ ಮಂಗಳಾರತಿ, ಪೂರ್ಣಹುತಿ ಸೇವೆ ಸಲ್ಲಿಸಿದರು. ಧಾರ್ಮಿಕ ಕಾರ್ಯಕ್ರಮಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪುರೋಹಿತರದ ಪ್ರವೀಣ್ ಭಟ್ ನೇತೃತ್ವದ ಅರ್ಚಕರ ತಂಡ ಹಾಗೂ ಹೆಗ್ಗಳ ಗ್ರಾಮದ ವಾಮನ ಮೂರ್ತಿ ಭಟ್, ವೇಣುಗೋಪಾಲ್ ಭಟ್ ನೇತೃತ್ವದಲ್ಲಿ ಜರುಗಿತು. ವಿರಾಜಪೇಟೆ ನಗರ, ಬೆಟೋಳಿ, ಹೆಗ್ಗಳ, ಆರ್ಜಿ ಗ್ರಾಮ ಸೇರಿದಂತೆ ವಿವಿಧೆಡೆಯಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನದಾನ ಜರುಗಿತು. ಈ ಸಂದರ್ಭ ಆಡಳಿತ ಮಂಡಳಿ ಹಾಜರಿದ್ದರು.









