
ಮಡಿಕೇರಿ NEWS DESK ಮೇ 2 : ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಖಂಡಿಸಿ ಕೊಡಗು ಜಿಲ್ಲಾ ಹಿಂದೂ ಸುರಕ್ಷಾ ಸಮಿತಿ ಹಾಗೂ ಹಿಂದೂ ಪರ ಸಂಘಟನೆಗಳು ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಶುಕ್ರವಾರ ಸಂಜೆ ಏಕಕಾಲದಲ್ಲಿ ಪ್ರತಿಭಟನೆ ನಡೆಸಿದವು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳ ಪ್ರಮುಖರು, ಸುಹಾಸ್ ಶೆಟ್ಟಿಯನ್ನು ಹತ್ಯೆಗೈದವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರದಿಂದ ಹಿಂದೂ ಕಾರ್ಯಕರ್ತರಿಗೆ ರಕ್ಷಣೆೆ ಇಲ್ಲದಂತಾಗಿದೆ ಎಂದು ಆರೋಪಿಸಿದರು. ಪ್ರಮುಖರಾದ ತಳೂರು ಕಿಶೋರ್ ಕುಮಾರ್, ಮನು ಮಂಜುನಾಥ್, ಅನಿತಾ ಪೂವಯ್ಯ, ಅರುಣ್ ಶೆಟ್ಟಿ, ಪಿ.ಎಂ.ರವಿ, ಮಹೇಶ್ ಜೈನಿ, ನಗರಸಭೆಯ ಬಿಜೆಪಿ ಸದಸ್ಯರುಗಳು, ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕುಶಾಲನಗರದ ಫೀ.ಮಾ.ಕಾರ್ಯಪ್ಪ ವೃತ್ತದಲ್ಲಿ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆಗಳ ಪ್ರಮುಖರು ಹಾಗೂ ಕಾರ್ಯಕರ್ತರು ಸುಹಾಸ್ ಶೆಟ್ಟಿ ಹತ್ಯಾ ಪ್ರಕರಣವನ್ನು ಖಂಡಿಸಿ, ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಸೋಮವಾರಪೇಟೆ, ವಿರಾಜಪೇಟೆ ಮತ್ತು ಪೊನ್ನಂಪೇಟೆಯಲ್ಲೂ ಪ್ರತಿಭಟನೆ ನಡೆಯಿತು.










