
ಮಡಿಕೇರಿ NEWS DESK ಮೇ 4 : ಅತ್ಯುತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶಿವಣ್ಣ ಎಸ್. ಅವರು ಇದೀಗ ತಮ್ಮನ್ನು ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಂಗಭೂಮಿ ಕಲಾವಿದರಾಗಿ ಮತ್ತು ಕಿರುತೆರೆ ನಟರಾಗಿ ಕಾಣಿಸಿಕೊಂಡಿರುವ ಶಿವಣ್ಣ ಅವರು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇಲ್ಲಿಯವರೆಗೆ ಇವರು ಕೆಂಗಲ್ ಹನುಮಂತಯ್ಯ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ, ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ, ಪಂಪ ಪ್ರಶಸ್ತಿ ಹಾಗೂ ಕರುನಾಡು ನಿಧಿ ಪತ್ರಿಕೆಯ ಕರುನಾಡ ನಿಧಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಕುಟ್ಟಂದಿ ಗ್ರಾಮದ ಕೆ.ಬಿ ಪ್ರೌಢ ಶಾಲೆಯಲ್ಲಿ 30 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಶಿವಣ್ಣ ಎಸ್. ಅವರು ಇದೀಗ ನಿವೃತ್ತಿ ಜೀವನವನ್ನು ಸಾಗಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರೀತಿಯ ಶಿಕ್ಷಕರಾಗಿ, ಶಿಕ್ಷಕರ ಆತ್ಮೀಯ ಸಹಪಾಠಿಯಾಗಿ ಗುರುತಿಸಿಕೊಂಡಿದ್ದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ನೀಡಿದ್ದಾರೆ. ಪ್ರಸ್ತುತ ಉತ್ತಮ ಗಾಯಕರಾಗಿ ಹಾಗೂ ರಂಗಭೂಮಿ ಕಲಾವಿದರಾಗಿ ಗಮನ ಸೆಳೆಯುತ್ತಿದ್ದಾರೆ. ನಾಟಕ ತರಬೇತಿ ಪಡೆಯುತ್ತಿದ್ದು, ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ ಎಸ್. ಅವರ ನಿಸ್ವಾರ್ಥ ಸೇವೆ, ಗಾಯನ ಮತ್ತು ಕಲಾಪ್ರೇಮವನ್ನು ಗುರುತಿಸಿ ಪ್ರಶಸ್ತಿಗಳು ಅರಸಿಕೊಂಡು ಬರುತ್ತಿವೆ.











