
ಮಡಿಕೇರಿ ಮೇ 7 NEWS DESK : ಮಡಿಕೇರಿ ನಗರಸಭೆಯ ನೂತನ ಅಧ್ಯಕ್ಷರಾದ ಕಲಾವತಿ ಹಾಗೂ ಉಪಾಧ್ಯಕ್ಷರಾದ ಮಹೇಶ್ ಜೈನಿ ಅವರನ್ನು ಭೇಟಿಯಾಗಿ ಅಭಿನಂದಿಸಿದ ನಗರಸಭಾ ಮಾಜಿ ಸದಸ್ಯ ಮತ್ತು ನಗರ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ ಅವರು ನಗರದ ಅಭಿವೃದ್ಧಿಯ ದೃಷ್ಟಿಯಿಂದ ಕೆಲವು ಬೇಡಿಕೆಗಳನ್ನು ಮಂಡಿಸಿದರು. ಮಳೆಗಾಲ ಸಮೀಪಿಸುತ್ತಿರುವುದರಿಂದ ನಗರದ ಎಲ್ಲಾ ತೋಡು ಮತ್ತು ಚರಂಡಿಗಳ ತ್ಯಾಜ್ಯವನ್ನು ವಿಲೇವಾರಿಗೊಳೀಸಬೇಕು. ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಬೇಕು. ರಸ್ತೆಗಳ ಬದಿಯ ಕಾಡು ಕಡಿಯಬೇಕು. ರಸ್ತೆ ಅಭಿವೃದ್ಧಿಗಾಗಿ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಮಳೆಗಾಲದೊಳಗೆ ವಿನಿಯೋಗ ಮಾಡಿ ಎಲ್ಲಾ ವಾರ್ಡ್ ಗಳ ರಸ್ತೆ ದುರಸ್ತಿ ಮಾಡಬೇಕು. ಸ್ಟೋನ್ ಹಿಲ್ ಪ್ರದೇಶದಲ್ಲಿ ಟನ್ ಗಟ್ಟಲೆ ತ್ಯಾಜ್ಯ ಇರುವುದರಿಂದ ಮಳೆಗಾಲದಲ್ಲಿ ಅಪಾಯ ಎದುರಾಗಬಹುದಾದ ಸಾಧ್ಯತೆಗಳಿದೆ. ಆದ್ದರಿಂದ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಮತ್ತು ನಗರದ ತ್ಯಾಜ್ಯವನ್ನು ವೈಜ್ಞಾನಿಕ ರೂಪದಲ್ಲಿ ವಿಲೇವಾರಿ ಮಾಡುವ ತ್ಯಾಜ್ಯ ಘಟಕದ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು. ಜಲ್ ಜೀವನ್ ಮಿಷನ್ ಯೋಜನೆಯ ಕಾಮಗಾರಿಯಿಂದ ಕೆಲವು ವಾಡ್ರ್ಗಳ ರಸ್ತೆಗಳಿಗೆ ಹಾನಿಯಾಗಿದ್ದು, ಮಳೆಗಾಲದಲ್ಲಿ ಅಪಾಯ ಎದುರಾಗುವ ಮೊದಲು ರಸ್ತೆ ದುರಸ್ತಿಪಡಿಸಬೇಕು. ಮಳೆಗಾಲದಲ್ಲಿ ಅಪಾಯಕ್ಕೆ ಸಿಲುಕುವ ಪ್ರದೇಶಗಳನ್ನು ಈಗಲೇ ಗುರುತು ಮಾಡಿ ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ಕಾವೇರಿ ಕಲಾಕ್ಷೇತ್ರದ ನೂತನ ಕಟ್ಟಡದ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಬೇಕು. ನೂತನ ಖಾಸಗಿ ಬಸ್ ನಿಲ್ದಾಣಕ್ಕೆ ಹೈಟೆಕ್ ಮಾದರಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ನಗರದ ಬೀದಿ ದೀಪಗಳನ್ನು ದುರಸ್ತಿ ಪಡಿಸಬೇಕು. ನಗರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ವಾಹನದಟ್ಟಣೆಯಾಗುತ್ತಿದೆ. ಆದ್ದರಿಂದ ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆಯನ್ನು ಕಲ್ಪಿಸಬೇಕು. ನಗರಸಭಾ ಕಚೇರಿಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿ ಬರುತ್ತಿರುವುದರಿಂದ ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಸರ್ವರ್ ಸಮಸ್ಯೆಯನ್ನು ಬಗೆಹರಿಸಿ ನೂತನ ತಂತ್ರಜ್ಞಾನವನ್ನು ಅಳವಡಿಸಬೇಕು. ಫಾರಂ ನಂ.3 ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ನಗರದಲ್ಲಿರುವ ಪ್ರಯಾಣಿಕರ ತಂಗುದಾಣಗಳನ್ನು ಅಭಿವೃದ್ಧಿ ಪಡಿಸಬೇಕು. ನಗರಸಭಾ ಪಾರ್ಕ್ ಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ನಗರದ ಗಾಂಧಿ ಮೈದಾನದಲ್ಲಿರುವ ರಂಗ ಮಂದಿರದ ಅಭಿವೃದ್ಧಿ ಕಾರ್ಯವನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು. ಸಾರ್ವಜನಿಕ ಸುಲಭ್ ಶೌಚಾಲಯಗಳ ಸ್ವಚ್ಛತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರಕಾಶ್ ಆಚಾರ್ಯ ಮನವಿ ಮಾಡಿದರು. ನೂತನ ಆಡಳಿತ ಮಂಡಳಿಗೆ ಅಭಿವೃದ್ಧಿ ಕಾರ್ಯಗಳಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.









