
ಮಡಿಕೇರಿ ಮೇ 12 NEWS DESK : ವಿಶ್ವಾದ್ಯಂತ ಪ್ರಖ್ಯಾತವಾಗಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗಿನ ಹಲವರು ತಮ್ಮ ಛಾಪು ಮೂಡಿಸಿದ್ದು, ಇಂತಹ ಕ್ರೀಡಾಕೂಟಗಳು ಯುವಕರ ಪ್ರತಿಭೆಯನ್ನು ಗುರುತಿಸಲು ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಸುಂಟಿಕೊಪ್ಪ ಸಂತ ಅಂತೋಣಿಯವರ ದೇವಾಲಯದ ಸಂಯುಕ್ತಾಶ್ರಯದಲ್ಲಿ ಸುಂಟಿಕೊಪ್ಪದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ 14ನೇ ವರ್ಷದ ಪಂದ್ಯಾವಳಿಯ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಮುದಾಯಗಳ ವತಿಯಿಂದ ಆಯೋಜನೆಗೊಳ್ಳುತ್ತಿರುವ ಕ್ರಿಕೆಟ್ ಪಂದ್ಯಾಟಗಳು ಅದ್ಭುತ ಯಶಸ್ಸು ಕಾಣುವುದು ಮಾತ್ರವಲ್ಲದೆ, ಸಮುದಾಯದ ಯುವಕರನ್ನು ಒಟ್ಟುಗೂಡಿಸಿ ಒಗ್ಗಟ್ಟು ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬಣ್ಣಿಸಿದರು. ಕ್ರೀಡೆಯು ಸದಾ ಮನೋಲ್ಲಾಸಕ್ಕೆ ಕಾರಣವಾಗಿದ್ದು, ಕ್ರೀಡೆಯಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಇತರ ದುಶ್ಚಟಗಳಿಂದ ದೂರ ಉಳಿಯಲು ಸಹಕಾರಿಯಾಗಲಿದೆ. ಮಾತ್ರವಲ್ಲ ತಮ್ಮ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಕ್ರೀಡೆಯು ಸಹಕಾರಿಯಾಗಲಿದೆ ಎಂದು ಹೇಳಿದರು. ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭ ಕೋರಿದ ಶಾಸಕರು ಆಯೋಜಕರ ಈ ಪ್ರಯತ್ನವನ್ನು ಶ್ಲಾಘಿಸಿದರು. ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸ್‍ನ್ ಪಿಂಟೋ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿರಾಜಪೇಟೆ ವಲಯ ಶ್ರೇಷ್ಠ ಗುರು ಫಾ.ಜೇಮ್ಸ್ ಡಾಮಿನಿಕ್, ಅಸೋಸಿಯೇಷನ್‍ನ ಕಾರ್ಯಧ್ಯಕ್ಷರಾದ ವಿ.ಎ.ಲಾರೆನ್ಸ್, ಸಿದ್ದಾಪುರ ಸಂತ ಮೇರಿ ದೇವಾಲಯದ ಧರ್ಮಗುರು ಫಾ.ಜೋಜಿ ವಡಕೇವಿಟಿಲ್, ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಉಪಾಧ್ಯಕ್ಷರಾದ ಶಿವಮ್ಮ, ಮಾಜಿ ಅಧ್ಯಕ್ಷರಾದ ರೋಸ್ ಮೇರಿ ರಾಡ್ರಿಗಸ್, ಜಿ.ಪಂ ಮಾಜಿ ಸದಸ್ಯ ಪಿ.ಎಂ.ಲತೀಫ್, ಕ್ರೀಡಾ ಕೂಟ ಆಚರಣಾ ಸಮಿತಿ ಸಂಚಾಲಕ ಪಿ.ಎಫ್.ಸೆಬಾಸ್ಟ್ಯನ್, ಗೌರವಾಧ್ಯಕ್ಷ ಜೋಕಿಮ್ ವಾಸ್, ಮಹಿಳಾ ಘಟಕದ ಉಪಾಧ್ಯಕ್ಷೆ ಗ್ರೇಸಿ ಡೇವಿಡ್, ಕಾರ್ಯಕಾರಿ ಮಂಡಳಿ ಸದಸ್ಯ ಪಿ.ಎಂ.ಬಿಜು ಸೇರಿದಂತೆ ಮತ್ತಿತರರು ಇದ್ದರು.
ಸನ್ಮಾನ :: ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪದಕ ಪುರುಸ್ಕøತರಾದ ಪೊಲೀಸ್ ಇಲಾಖೆಯ ರಾಜೇಶ್, ಎಂ.ಎಸ್.ಸಿ (ಸಿ.ಎಸ್) ಪದವಿಯಲ್ಲಿ ಚಿನ್ನದ ಪದಕ ವಿಜೇತರಾದ ಶೈನಿ ಡಿ’ಸೋಜ, ಪ್ರಗತಿಪರ ಕೃಷಿಕ ಎಸ್.ಎಂ.ಡಿ’ಸಿಲ್ವ, ಎಂ.ಬಿ.ಬಿ.ಎಸ್ ನಲ್ಲಿ ಉನ್ನತ ಅಂಕ ಪಡೆದ ಡಾ.ಆನ್ ಲಿಷಾ, ಸಮಗ್ರ ಕೃಷಿಕ ಪಿ.ಎಂ.ಬಿಜು, ಸಸ್ಯಶಾಸ್ತ್ರದಲ್ಲಿ ಪಿ.ಹೆಚ್.ಡಿ ಪಡೆದ ಡಾ.ನಿಲನ ಜೇಮ್ಸ್, ಟೆರೆಶಿಯನ್ ಪ್ರೆಸ್ ಮಾಲೀಕ ಪೌಲ್ ಕ್ಸೇವಿಯರ್, ನಾಟಿ ವೈದ್ಯ ಜಾನ್ ಲೋಬೋ, ಉರಗ ತಜ್ಞ ಪಿಯೂಸ್ ಪೆರೆರಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.









