
ಮಡಿಕೇರಿ ಮೇ 12 NEWS DESK : ನಗರದ ಶ್ರೀ ಮುತ್ತಪ್ಪ ದೇವಾಲಯದಲ್ಲಿರುವ ಶ್ರೀ ಭಗವತಿ ದೇವಿಯ ವಾರ್ಷಿಕ ಪೊಂಗಾಲ ಉತ್ಸವವು ಮೇ 18 ರಂದು ನಡೆಯಲಿದೆ ಎಂದು ಶ್ರೀ ಮುತ್ತಪ್ಪ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದ ರಾಮನ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಪುರಾತನ ದೇವಾಲಯಗಳಲ್ಲೊಂದಾದ ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಪಾರ್ವತಿ, ಸರಸ್ವತಿ, ಮಹಾಲಕ್ಷ್ಮಿ, ದುರ್ಗಿ ಸಂಕಲ್ಪದಲ್ಲಿರುವ ಶ್ರೀ ಭಗವತಿ ದೇವಿಗೆ ಪೊಂಗಾಲ ಸೇವೆಯನ್ನು ಬೆಳಿಗ್ಗೆ 8.30ಕ್ಕೆ ನಡೆಸಲು ಉದ್ದೇಶಿಸಲಾಗಿದ್ದು, ಈ ಬಾರಿ ವಿಜೃಂಭಣೆಯಿಂದ ಉತ್ಸವ ನಡೆಸಲಾಗುವುದು. ಇದು ಕೇವಲ ಮಹಿಳೆಯರು ಮಾತ್ರ ನಡೆಸುವ ಪುಣ್ಯ ಕಾರ್ಯವಾಗಿದ್ದು, ಪೊಂಗಾಲ ಸಮರ್ಪಣೆಯಿಂದ ಮನೆಯಲ್ಲಿ ಆರೋಗ್ಯ ಶಾಂತಿ, ನೆಮ್ಮದಿ ನೆಲೆಸುವ ನಂಬಿಕೆ ಇದೆ ಎಂದರು. ಇಟ್ಟಿಗೆ ಅಥವಾ ಕಲ್ಲುಗಳನ್ನು ಜೋಡಿಸಿ ಒಲೆಯನ್ನು ಹಾಕಿ ಸೌದೆಗಳನ್ನು ಜೋಡಿಸಿ ಸಿದ್ಧಪಡಿಸಿದ ನಂತರ ಅರ್ಚಕರು ನೀಡಿದ ಕರ್ಪೂರದಾರತಿಯಿಂದ ಒಲೆ ಉರಿಸಿ, ಹೊಸ ಮಡಿಕೆಯಲ್ಲಿ ನೀರು ತುಂಬಿಸಿ, ಪೊಂಗಾಲ ತಯಾರಿಕೆ ಮಾಡಲಾಗುತ್ತದೆ ಎಂದು ಹೇಳಿದರು. ಪೊಂಗಾಲ ಸೇವೆ ಮಾಡಲಿಚ್ಚಿಸುವ ಮಹಿಳೆಯರು ಮೂರು ದಿನ ಶುದ್ಧಿಯಿಂದ ವೃತ ಮಾಡಬೇಕು. ಪೊಂಗಾಲ ತಯಾರಿಕೆಗಾಗಿ ಬೇಕಾಗುವ ಸಾಮಾಗ್ರಿಗಳಾದ ಹೊಸ ಮಡಿಕೆ, ಸೌದೆ, ಅಕ್ಕಿ, ಬೆಲ್ಲ, ಕಾಯಿ, ತುಪ್ಪ, ಏಲಕ್ಕಿ, ದ್ರಾಕ್ಷಿ, ಗೋಡಂಬಿ ಮುಂತಾದವುಗಳನ್ನು ದೇವಸ್ಥಾನದಿಂದಲೇ ಒದಗಿಸಿಕೊಡಲಾಗುವುದು. ರೂ.300 ನೀಡಿ ಮುಂಗಡ ರಶೀತಿ ಪಡೆದು ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಶಾರದ ರಾಮನ್ ಮಾಹಿತಿ ನೀಡಿದರು. ಸೇವೆಗೆ ಬರುವಂತ ಮಹಿಳೆಯರು ಮಡಿಕೆ ಮುಚ್ಚಲ ಒಂದು ಮುಚ್ಚಳ, 2 ಶುಭ್ರವಾದ ಚೇಲೆ ಮುಂಡ್ ತರಬೇಕು. ಹೆಚ್ಚಿನ ಮಾಹಿತಿಗಾಗಿ 9449402045, 9663973559, 9741980497, 8861290731 ಸಂಪರ್ಕಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸಲಹೆಗಾರರಾದ ವಿಶಾಲಕ್ಷಿ ಸುಕುಮಾರ್, ಕಾರ್ಯಕ್ರಮದ ಸಂಚಾಲಕರಾದ ಪವಿತ್ರ ರೆಜಿ, ಸದಸ್ಯರಾದ ಮಂಜುಳಾ ಶಿವಕುಮಾರ್, ಪಾಂಡಂಡ ಸರಿತಾ ಅಯ್ಯಪ್ಪ, ಶ್ರೀ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ.ಸುಧೀರ್ ಉಪಸ್ಥಿತರಿದ್ದರು.









