
ಮಡಿಕೇರಿ ಮೇ 12 NEWS DESK : ರಾಜ್ಯ ಸರ್ಕಾರ ಹಳೇ ಮೈಸೂರು ಭಾಗಕ್ಕೆ ಘೋಷಣೆ ಮಾಡಿದಂತೆ ಕೊಡಗು ಜಿಲ್ಲೆಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿರುವ ಕಾವೇರಿ ನಾಡು ಕೊಡಗಿನ ಬಗ್ಗೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ತೋರುವುದು ಸರಿಯಲ್ಲ. ಹಳೇ ಮೈಸೂರು ಭಾಗದ ಗಡಿಯಲ್ಲಿರುವ ಕೊಡಗು ಜಿಲ್ಲೆಗೂ ಅಗತ್ಯ ಅನುದಾನ ನೀಡಲಿ ಎಂದು ಆಗ್ರಹಿಸಿದ್ದಾರೆ ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಸರ್ಕಾರದ ಸಂಪುಟ ಸಭೆಯಲ್ಲಿ ಹಳೇ ಮೈಸೂರು ಭಾಗದ ಹೆಚ್.ಡಿ.ಕೋಟೆ, ಮೈಸೂರು ಹಾಗೂ ಚಾಮರಾಜನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು 3600ಕೋಟಿ ರೂ.ಗಳಷ್ಟು ವಿಶೇಷ ಪ್ಯಾಕೇಜ್ ನ್ನು ಘೋಷಣೆ ಮಾಡಿದ್ದಾರೆ. ಇದರ ಪಕ್ಕದಲ್ಲೇ ಇರುವ ಕೊಡಗು ಜಿಲ್ಲೆ ಕೂಡ ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಸ್ಥಳೀಯ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು ಎಂದು ಹೇಳಿದ್ದಾರೆ. ಕೊಡಗು ವಿಶ್ವ ವಿದ್ಯಾನಿಲಯವನ್ನು ಜಿಲ್ಲೆಯಲ್ಲೇ ಉಳಿಸಿಕೊಳ್ಳುವುದು, ಹವಾಗುಣ ವೈಪರೀತ್ಯದಿಂದ ಮತ್ತು ಪ್ರಾಕೃತಿಕ ವಿಕೋಪಗಳಿಂದ ರೈತಾಪಿ ವರ್ಗ ಅನುಭವಿಸುತ್ತಿರುವ ನಷ್ಟಕ್ಕೆ ಪರಿಹಾರ ಸೂಚಿಸುವುದು, ವನ್ಯಜೀವಿಗಳ ದಾಳಿಯನ್ನು ತಡೆಗಟ್ಟಿ ಜನತೆಗೆ ರಕ್ಷಣೆ ನೀಡುವುದು, ಫಸಲು ನಷ್ಟವನ್ನು ತಡೆಯುವುದು, ಯುವ ಜನತೆಗೆ ಉದ್ಯೋಗ ಸೃಷ್ಟಿ ಮಾಡುವುದು, ಮಾಜಿ ಸೈನಿಕರು, ಮಹಿಳೆಯರು ಹಾಗೂ ಆದಿವಾಸಿಗಳ ಕಲ್ಯಾಣಕ್ಕಾಗಿ ಕ್ರಮ ಕೈಗೊಳ್ಳುವುದು, ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಲು ಯೋಜನೆ ರೂಪಿಸುವುದು, ಕಲುಷಿತಗೊಂಡಿರುವ ಕಾವೇರಿ ನದಿಯ ಹೂಳು ತೆಗೆಯುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಮತ್ತು ಅತಿವೃಷ್ಟಿಯಿಂದ ಜಿಲ್ಲೆಯ ರಸ್ತೆಗಳು ಹದಗೆಡುವುದರಿಂದ ರಸ್ತೆ ಅಭಿವೃದ್ಧಿ ಪ್ಯಾಕೇಜ್ ನ್ನು ಪ್ರತಿ ವರ್ಷದ ಬಜೆಟ್ ನಲ್ಲಿ ಮೀಸಲಿಡುವುದಕ್ಕೆ ಸರ್ಕಾರ ಮುಂದಾಗಬೇಕು. ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗಾಗಿ ದೊಡ್ಡ ಮೊತ್ತದ ವಿಶೇಷ ಪ್ಯಾಕೇಜ್ ನ್ನು ಸರ್ಕಾರ ಘೋಷಣೆ ಮಾಡಬೇಕು. ಜಿಲ್ಲೆಯ ಇಬ್ಬರು ಶಾಸಕರು ಪ್ಯಾಕೇಜ್ ಕುರಿತು ವಿಶೇಷ ಕಾಳಜಿ ತೋರಬೇಕು ಎಂದು ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ.









