
ನಾಪೋಕ್ಲು ಮೇ 13 NEWS DESK : ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಾಲಯದ ಗರ್ಭಗುಡಿ ಮತ್ತು ತೀರ್ಥ ಮಂಟಪದ ಶಿಲಾನ್ಯಾಸ ಕಾರ್ಯವು ಶ್ರದ್ಧಾಭಕ್ತಿಯಿಂದ ಜರುಗಿತು. ಏಳುನೂರು ವರ್ಷ ಪುರಾತನ ಇತಿಹಾಸವಿರುವ ಗ್ರಾಮದ ಧಾರ್ಮಿಕ ಸಾನಿಧ್ಯ ಗೋಪಾಲಕೃಷ್ಣ ದೇವಸ್ಥಾನ. ಶ್ರೀ ಕೃಷ್ಣ ಪರಮಾತ್ಮ ಅವಂದೂರು ಗ್ರಾಮದ ಗ್ರಾಮ ದೇವರು. ಪ್ರಸ್ತುತ ಶ್ರೀ ದೇವರ ಸನ್ನಿಧಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪೂರ್ವ ಭಾವಿ ಕೆಲಸ ಕಾರ್ಯಗಳು ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದೆ. ಕಾಸರಗೋಡಿನ ಪ್ರಸಿದ್ಧ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದೊಂದಿಗೆ ತಂಡದವರಾದ ಮುರಾರಿ ಮತ್ತು ಸ್ಕಂದ ತಂತ್ರಿಗಳು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥ ಮಂಟಪದ ಶಿಲಾನ್ಯಾಸ ಕಾರ್ಯಕ್ರಮದ ವಿಶೇಷ ಪೂಜೆ, ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ಸಿಂಧೂರ ಕಾರ್ಯಾಚರಣೆಯ ಭಾರತೀಯ ಸೇನೆ ಯೋಧರ ಯಶಸ್ಸಿಗೆ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಲಾಯಿತು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ದಿನೇಶ್ ಭಟ್, ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕಡ್ಯದ ಸೋಮಣ್ಣ, ಉಪಾಧ್ಯಕ್ಷ ಚೊಕ್ಕಾಡಿ ಅಪ್ಪಯ್ಯ, ಕಾರ್ಯದರ್ಶಿ ಪಟ್ಟಡ ಸುಗುಣ ಕುಮಾರ್, ಖಜಾಂಚಿ ಬೆಳ್ಯನ ಚಂದ್ರಪ್ರಕಾಶ್, ಜೀರ್ಣೋದ್ಧಾರ ಸಮಿತಿಯ ಸರ್ವ ಪದಾಧಿಕಾರಿಗಳು, ದೇವಸ್ಥಾನ ಜೀರ್ಣೋದ್ಧಾರದ ಮೂಲ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ









