
ಸುಂಟಿಕೊಪ್ಪ ಮೇ 13 NEWS DESK : ರಕ್ತದಾನವು ಮನುಷ್ಯನ ಜೀವ ಉಳಿಸುವ ಮಹತ್ವದ ಕಾರ್ಯವಾಗಿದ್ದು, ಯುವಜನತೆಗೆ ಇದರ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ರೇ.ಫಾ.ವಿಜಯಕುಮಾರ್ ಹೇಳಿದರು. ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಸಂತ ಅಂತೋಣಿಯವರ ದೇವಾಲಯದ ಸಂಯುಕ್ತಾಶ್ರಯದಲ್ಲಿ 14ನೇ ವರ್ಷ ಟೆನ್ನಿಬಾಲ್ ಕ್ರಿಕೆಟ್ ಪಂದ್ಯಾವಳಿ ಮತ್ತು ಇತರ ಕ್ರೀಡಾಕೂಟಗಳು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ರಕ್ತದಾನಕ್ಕೆ ಯಾವುದೇ ಜಾತಿ ಮತ ಇಲ,್ಲ ಎಲ್ಲರ ರಕ್ತದ ಬಣ್ಣವು ಕೆಂಪಾಗಿದ್ದು, ಈ ಸರಳ ಸತ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ವಿವಿಧತೆಯಲ್ಲಿ ಏಕತೆಯನ್ನು ಪಾಲಿಸಿಕೊಂಡು ಪರಸ್ಪರ ಸಾಮರಸ್ಯ ಮತ್ತು ಸೌಹಾರ್ದತೆಯಿಂದ ಬಾಳಬಹುದು ಎಂದು ಕಿವಿಮಾತು ಹೇಳಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಅಧೀನದಲ್ಲಿರುವ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಅನಿಲ್ ಕರುಂಬಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತದಾನದ ಮಹತ್ವ ಹೆಚ್ಚಾಗಿ ಪ್ರಚಾರಗೊಳ್ಳುತ್ತಿದ್ದು ವಿಶೇಷ ಸಂದರ್ಭಗಳಲ್ಲಿ ಸಾಮೂಹಿಕ ರಕ್ತದಾನ ಶಿಬಿರ ಏರ್ಪಡಿಸುತ್ತಿರುವುದು ಶ್ಲಾಘನೀಯ. ವೈಯಕ್ತಿಕ ನೆಲೆಗಟ್ಟಿನಲ್ಲಿ ಕೂಡ ನಿಯಮಿತವಾಗಿ ರಕ್ತದಾನ ಮಾಡುವುದು ಹವ್ಯಾಸವಾಗಬೇಕೆಂದು ಅವರು ಕರೆ ನೀಡಿದರು. ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮ್ಮತ್ತಿ ದೇವಾಲಯದ ಧರ್ಮಗುರುಗಳಾದ ಮದಲೈಮುತ್ತು, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಜೋವಿಟಾ ವಾಝ್, ಸಂತ ಅಂತೋಣಿ ದೇವಾಲಯದ ಕ್ರೀಡಾ ಆರ್ಥಿಕ ಸಮಿತಿ ಅಧ್ಯಕ್ಷ ಪಿ.ಎಂ.ಬಿಜು, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷರುಗಾಳದ ಜೋಕಿಂ ವಾಝ್, ಜೋಕಿಂ ರಾಡ್ರಿಗಸ್, ಯೇಸುದಾಸ್, ಕಾರ್ಯದರ್ಶಿ ಜೂಡಿವಾಝ್, ಖಜಾಂಚಿ ಜೇಮ್ಸ್ ಡಿ’ಸೋಜ, ಮಹಿಳಾ ಘಟಕದ ಅಧ್ಯಕ್ಷ ಪಿಲೋಮಿನಾ, ಗ್ರಾ.ಪಂ.ಮಾಜಿ ಅಧ್ಯಕ್ಷೆ ಹಾಗೂ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಮಹಿಳಾ ಘಟಕಗಳ ಸದಸ್ಯರುಗಳಾದ ರೋಸ್‍ಮೇರಿ ರಾಡ್ರಿಗಸ್, ಗ್ರೇಸಿ ಡೇವಿಡ್, ಗೌರವ ಸಲಹೆಗಾರುಗಳಾದ ಎಸ್.ಎಂ.ಡಿಸಿಲ್ವ, ಮರ್ವಿನ್ ಲೋಬೋ, ಆಗಸ್ಟಿನ್ ಜಯರಾಜ್, ಅಂತೋಣಿ ಡಿ’ಸೋಜ, ಪಿ.ಎಫ್.ಸಬಾಸ್ಟೀನ್, ಡೆನ್ನಿ ಬರೋಸ್, ಪಿಲಿಫ್‍ವಾಸ್, ಯುವಘಟಕದ ಅಧ್ಯಕ್ಷ ಬಬುಲು ಸೇರಿದಂತೆ ಮತ್ತಿತರರು ಇದ್ದರು. 25ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ರಕ್ತದಾನ ಮಾಡಿದರು.









