
ಸೋಮವಾರಪೇಟೆ NEWS DESK ಮೇ 14 : ರಂಗಭೂಮಿ ಅತ್ಯಂತ ಪ್ರಭಾವಶಾಲಿ ಕ್ಷೇತ್ರವಾಗಿದೆ, ಆದರೆ ಪ್ರಸ್ತುತ ಸಾಂಪ್ರದಾಯಿಕ ಕಲೆಗಳು ಮರೆಯಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಎಸ್.ಮಹೇಶ್ ವಿಷಾದಿಸಿದ್ದಾರೆ. ಸೋಮವಾರಪೇಟೆ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಗೆಜ್ಜೆಗಿರಿ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಭಾವಶಾಲಿಯಾಗಿರುವ ರಂಗಭೂಮಿಯಿಂದ ಬಂದಂತಹ ಹಲವು ಹಿರಿಯ ಕಲಾವಿದರು ಚಿತ್ರರಂಗದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಆಧುನಿಕತೆ ಬೆಳೆದಂತೆ ನಾಟಕ, ಯಕ್ಷಗಾನ ಮುಂತಾದ ಸಾಂಪ್ರದಾಯಿಕ ಕಲೆಗಳು ಮರೆಯಾಗುತ್ತಿರುವುದು ವಿಷಾದಕರವೆಂದರು. ಸೋಮವಾರಪೇಟೆಯಲ್ಲಿ ಹಲವು ವರ್ಷಗಳ ನಂತರ ಯಕ್ಷಗಾನ ಪ್ರದರ್ಶನ ಏರ್ಪಡಿಸಿರುವುದು ಕಲಾಪ್ರೇಮಿಗಳಿಗೆ ಸಂತಸ ತಂದಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ದೀಪಕ್ ಮಾತನಾಡಿ ಕಲೆಗಳು ಸಂಸ್ಕೃತಿಯ ಪ್ರತೀಕವಾಗಿದೆ, ನಮ್ಮ ಭಾಷೆಯ ಉಳಿವು ಇಂತಹ ಕಲಾಪ್ರದರ್ಶನದಿಂದ ಸಾಧ್ಯವೆಂದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಾಯೋಜಕರಾದ ಪದ್ಮನಾಭ ಹಾಗೂ ಅವರ ತಾಯಿಯನ್ನು ಸನ್ಮಾನಿಸಿ, ಗೌರವಿಸಲಾಯಿತು. ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಚಂದ್ರಹಾಸ ಅಧ್ಯಕ್ಷತೆ ವಹಿಸಿದ್ದರು, ಗೆಜ್ಜೆಗಿರಿ ಯಕ್ಷಗಾನ ವ್ಯವಸ್ಥಾಪಕ ರೂವಾರಿ ದೀಪಕ್, ಬಂಟರ ಸಂಘದ ಅಧ್ಯಕ್ಷ ಜನಾರ್ಧನ, ಜನಪದ ಪರಿಷತ್ತು ಅಧ್ಯಕ್ಷ ಪ್ರಕಾಶ್, ಪ್ರಮುಖರಾದ ಮಂಜುನಾಥ್ ಚೌಟ, ವಿಶ್ವರೂಪ, ನಾರಾಯಣಗುರು ಸೇವಾ ಸಮಿತಿಯ ಗೌರವ ಸಲಹೆಗಾರ ಬಿ.ಎ.ಭಾಸ್ಕರ್, ಪ್ರಧಾನ ಕಾರ್ಯದರ್ಶಿ ಇಂದಿರಾ ಮೋನಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.








