
ನಾಪೋಕ್ಲು ಮೇ 17 NEWS DESK : ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳಲು ಬೇಸಿಗೆ ಶಿಬಿರ ಸಹಕಾರಿಯಾಗಿದೆ ಎಂದು ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಬಿ.ಹಮೀದ್ ಹೇಳಿದರು. ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ, ಗ್ರಾಮ ಪಂಚಾಯಿತಿ ಅರಿವು ಕೇಂದ್ರ, ಗ್ರಾಮ ಪಂಚಾಯಿತಿ ಹೊದ್ದೂರು ಸಂಯುಕ್ತ ಆಶ್ರಯದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿದ್ದ ಹತ್ತು ದಿನದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಮಾತನಾಡಿ, ಹಿಂದಿನ ದಿನಗಳಲ್ಲಿ ರಜಾ ಅವಧಿಯಲ್ಲಿ ಮಕ್ಕಳು ಸಂಬಂಧಿಕರ ಮನೆಗಳಿಗೆ, ಸಮಾರಂಭಗಳಿಗೆ ತೆರಳಿ ಸಂಸ್ಕೃತಿ, ಆಚಾರ, ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದರು. ಆದರೆ ಇದೀಗ ಟಿವಿ, ಮೊಬೈಲ್ ನಿಂದಾಗಿ ದಾರಿತಪ್ಪುತ್ತಿರುವ ಮಕ್ಕಳನ್ನು ಸರಿದಾರಿಗೆ ತರಲು ಬೇಸಿಗೆ ಶಿಬಿರವು ಸಹಕಾರಿಯಾಗಿದೆ ಈ ಶಿಬಿರದಲ್ಲಿ ಮಕ್ಕಳಿಗೆ ಚಟುವಟಿಕೆ ಮೂಲಕ ಜ್ಞಾನ ತುಂಬ ಕೆಲಸವನ್ನು ಮಾಡಲಾಗುತ್ತಿದೆ ಎಂದರು. ಎಸ್ ಡಿಎಂ ಸಿ ಸದಸ್ಯ ವಿ.ಎಂ.ಸುಬ್ರಮಣಿ ಮಾತನಾಡಿ, ಶಾಲೆಯಲ್ಲಿ ಓದುವ ಮಕ್ಕಳ ಪೋಷಕರು ಹೆಚ್ಚಿನವರು ಕೂಲಿಕಾರ್ಮಿಕರಾಗಿದ್ದು ಅವರು ಕೆಲಸಕ್ಕೆ ಹೋದಾಗ ಮಕ್ಕಳು, ಮೊಬೈಲ್ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅದರಿಂದ ಆಗುವ ಹಾನಿ ತಪ್ಪಿಸಲು ಬೇಸಿಗೆ ಶಿಬಿರ ಸಹಕಾರಿ ಎಂದರು. ಶಿಬಿರದ ಸಂಪನ್ಮೂಲ ವ್ಯಕ್ತಿ ಹೊದ್ದೂರು ಗ್ರಾಮ ಪಂಚಾಯಿತಿ ಗ್ರಂಥ ಪಾಲಕಿ ಸರಸ್ವತಿ, ಮೈಸೂರು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆಯ ಡಾ. ಚೈತ್ರ ಹಾಗೂ ಹೊದ್ದೂರು ಗ್ರಾಮ ಪಂಚಾಯಿತಿ ಪಿಡಿಒ ಅಬ್ದುಲ್ಲ ಪಂಚಾಯಿತಿ ಸಿಬ್ಬಂದಿಗಳ ಮಿಲನ್ ಮತ್ತು ಬಾಬು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









