ಮಡಿಕೇರಿ NEWS DESK ಮೇ 18 : ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಮೂಲಕ ಭಯೋತ್ಪಾದಕರ ವಿರುದ್ಧ ದಿಗ್ವಿಜಯ ಸಾಧಿಸಿದ ಭಾರತೀಯ ಸೇನೆಗೆ ಗೌರವ ಸಮರ್ಪಿಸಲು ಇದೇ ಮೇ 23 ರಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿಯಲ್ಲಿ ಸಿಂಧೂರ ವಿಜಯೋತ್ಸವ ಮೆರವಣಿಗೆ ನಡೆಯಲಿದೆ. ಶುಕ್ರವಾರ ನಗರದಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಕೊಡಗು ಜಿಲ್ಲಾ ಸಿಂಧೂರ ವಿಜಯೋತ್ಸವ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಮಹದೇವಪೇಟೆಯ ಬನ್ನಿ ಮಂಟಪದಿಂದ ಗಾಂಧಿ ಮೈದಾನದವರೆಗೆ ನಡೆಯುವ ಬೃಹತ್ ಮೆರವಣಿಗೆಯಲ್ಲಿ ಪ್ರತಿ ಮನೆಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಆ ಮೂಲಕ ನಮ್ಮೆಲ್ಲರ ನೆಮ್ಮದಿಗಾಗಿ ಹಗಲಿರುಳು ದೇಶ ಕಾಯುತ್ತಿರುವ ಸೈನಿಕರಿಗೆ ಮನಃಪೂರ್ವಕವಾಗಿ ಗೌರವ ಮತ್ತು ಧನ್ಯವಾದ ಸಮರ್ಪಿಸೋಣ ಎಂದು ಸಮಿತಿ ಮನವಿ ಮಾಡಿದೆ.










