
ಮಡಿಕೇರಿ NEWS DESK ಮೇ 18 : ಜಗತ್ತಿನ ಸಂಕಟ ವಿಮೋಚನೆಗಾಗಿ ಅನಾದಿಕಾಲದಿಂದಲೂ ಶ್ರೀರುದ್ರ ದೇವನಿಗೆ ಶರಣಾಗುವುದು ನಮ್ಮ ಸಂಸ್ಕೃತಿಯಲ್ಲಿ ಬೆಳೆದು ಬಂದ ಪದ್ಧತಿಯಾಗಿದೆ. ಸಂಕಟ ನಿವಾರಣೆಗೆ ರುದ್ರ ಜಪಯಜ್ಞ ಉತ್ತಮ ಮಾರ್ಗವಾಗಿದೆ ಎಂದು ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ರುದ್ರಾಧ್ಯಾಯಿಕೆ ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ. ತಲಕಾವೇರಿಯ ಕೈಲಾಸಾಶ್ರಮದಲ್ಲಿ ರುದ್ರ ಜಪಯಜ್ಞದ ಮಹತ್ವದ ಕುರಿತು ಉಪನ್ಯಾಸ ನೀಡಿದ ಅವರು ರುದ್ರಮಂತ್ರಗಳಲ್ಲಿ ಭಗವಂತನ ಸರ್ವವ್ಯಾಪಕತ್ವ ವಿವರಿಸಲಾಗಿದೆ. ಅನಂತ ಸ್ವರೂಪಿಯಾದ ಪರಮಾತ್ಮನನ್ನು ಎಲ್ಲದರಲ್ಲೂ ಕಾಣುವುದೇ ಶ್ರೀರುದ್ರ ಜಪ ಕೈಂಕರ್ಯದ ಅಂತರಾರ್ಥವಾಗಿದೆ ಎಂದರು. ತಲಕಾವೇರಿ ಸನ್ನಿಧಿಯಲ್ಲಿ 9ದಿನಗಳ ಕಾಲ ನಡೆದ ಅತಿರುದ್ರ ಜಪಯಜ್ಞವು ಯಶಸ್ವಿಯಾಗಿ ನಡೆಯಲು ನೂರಾರು ಮಂದಿ ಆಸ್ತಿಕರು ಸಹಕಾರ ನೀಡಿರುವುದು ಮಾದರಿಯಾದ ಕಾರ್ಯವಾಗಿದೆ. ಅವಧೂತರಾದ ಶ್ರೀಶ್ರೀ ಕಾಂತಾನಂದ ಸರಸ್ವತಿ ಮಹಾರಾಜರು ಸಂಕಲ್ಪಿಸಿರುವ ಧಾರ್ಮಿಕತೆ ಕೊಡಗು ಮತ್ತು ಕರ್ನಾಟಕದ ಜನತೆಯ ಸೌಭಾಗ್ಯವಾಗಿದೆ. ಈ ಜಪಯಜ್ಞ ಎಲ್ಲಾ ಋತ್ವಿಜರಿಗೂ ಅಲೌಕಿಕವಾದ ಅನುಭವವನ್ನು ತಂದುಕೊಟ್ಟಿದೆ ಎಂದು ನಾಗರಾಜ್ ತಿಳಿಸಿದರು.









