
ವಿರಾಜಪೇಟೆ ಮೇ 19 NEWS DESK : ವಿರಾಜಪೇಟೆಯ ಪೆರುಂಬಾಡಿ ಬಳಿ ಉನ್ನತೀಕರಣಗೊಳ್ಳುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಪರಿಶೀಲಿಸಿದರು. ಕಾಮಗಾರಿಯ ಕುರಿತು ವಿವರಣೆ ನೀಡಿದ ಶಾಸಕರು ತಾನು ಹಾಗೂ ಇತರ ಜನಪ್ರತಿನಿಧಿಗಳು ಚರ್ಚೆ ಮಾಡಿ ಈ ಕಾಮಗಾರಿ ತರುವಲ್ಲಿ ಯಶಸ್ವಿಯಾಗಿದ್ದು, ಸುಮಾರು 34 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಘನತ್ಯಾಜ್ಯವನ್ನು ವಿಲೇವಾರಿ ಮಾಡುವಲ್ಲಿ ಈ ಘಟಕ ಸಹಕಾರಿಯಾಗಲಿದೆ. ಮಾತ್ರವಲ್ಲ ದೀರ್ಘಕಾಲದ ಘನತಾಜ್ಯ ಸಮಸ್ಯೆಗೆ ಇದು ಪರಿಹಾರ ಒದಗಿಸಲಿದೆ ಎಂದು ಹೇಳಿದರು. ಈ ಘಟಕವು ಮೂರು ಹಂತದಲ್ಲಿ ಕಾರ್ಯ ನಿರ್ವಹಿಸಲಿದ್ದು, ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಇದು ಶಾಶ್ವತ ಪರಿಹಾರ ಒದಗಿಸಲಿದೆ ಎಂದು ಹೇಳಿದರು. ಎಲ್ಲರೂ ತಮ್ಮ ಮನೆಗಳಲ್ಲಿಯೇ ಒಣಕಸ ಮತ್ತು ಹಸಿ ಕಸವನ್ನು ಪ್ರತ್ಯೇಕಿಸಿ ನೀಡಿದಲ್ಲಿ ಅತ್ಯಂತ ಸುಲಭವಾಗಲಿದೆ ಮತ್ತು ಸಾರ್ವಜನಿಕರು ಶುಚಿತ್ವದ ಬಗ್ಗೆ ಜಾಗೃತರಾಗಿ ನಮ್ಮ ಈ ಪ್ರಯತ್ನದಲ್ಲಿ ಕೈಜೋಡಿಸಬೇಕೆಂದು ಕರೆ ನೀಡಿದರು. ಗುತ್ತಿಗೆದಾರರು ಮಳೆಗಾಲ ಪ್ರಾರಂಭವಾಗುವುದಕ್ಕೂ ಮೊದಲೇ ಈ ಕಾಮಗಾರಿಯನ್ನು ಪೂರೈಸಿ ಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭ ವಿರಾಜಪೇಟೆ ಪುರಸಭೆ ಅಧ್ಯಕ್ಷೆ ದೇಚ್ಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಹಾ ತಬುಸುಮ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಸದಸ್ಯರು ಹಾಗೂ ಪ್ರಮುಖರು ಉಪಸಿತರಿದ್ದರು. ಶಾಸಕರ ವಿಶೇಷ ಕಾಳಜಿ ಹಾಗೂ ಪ್ರಯತ್ನದಿಂದಾಗಿ ಪೆರುಂಬಾಡಿ ಭಾಗದಲ್ಲಿ, ಉನ್ನತ ದರ್ಜೆಯ ಅತ್ಯಾಧುನಿಕ ಹಾಗೂ ಪರಿಸರಸ್ನೇಹಿ ಕಸ ವಿಲೇವಾರಿ ಘಟಕಕ್ಕೆ ಸರಕಾರದ ವತಿಯಿಂದ ಅನುದಾನ ಒದಗಿದ್ದು ಈ ಕಾಮಗಾರಿಯು ಪ್ರಗತಿಯಲ್ಲಿದೆ. ಈ ಹಿಂದೆ ಸಾರ್ವಜನಿಕರ ಕೋರಿಕೆಗೆ ಮನ್ನಣೆ ನೀಡಿ ಕೆಲವೇ ತಿಂಗಳಲ್ಲಿ ಈ ಅನುದಾನ ತರುವಲ್ಲಿ ಶಾಸಕರು ಮುತುವರ್ಜಿ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.










