
ಮಡಿಕೇರಿ ಮೇ 19 NEWS DESK : ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕಾಗಿ ಮಿತಿ ಮೀರಿ ಸಾಲ ಮಾಡಿ ವಿವಿಧ ಕ್ಷೇತ್ರಗಳನ್ನು ದಿವಾಳಿ ಮಾಡಿರುವುದೇ ರಾಜ್ಯ ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆಯಾಗಿದೆ ಎಂದು ಮೈಸೂರು- ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2013 ರಿಂದ 2018 ರವರೆಗೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಅತಿಹೆಚ್ಚು ಸಾಲ ಮಾಡಿದ್ದರು. ಇದೀಗ 2023 ರಲ್ಲಿ ಅಧಿಕಾರಕ್ಕೆ ಬಂದಿರುವ ಅವರು ಈ ಹಿಂದಿನ ಸಾಲವನ್ನು ಮೀರಿ ಸಾಲವನ್ನು ಮಾಡಿದ್ದು, ರಾಜ್ಯದ ಪ್ರತಿ ವ್ಯಕ್ತಿಯ ಮೇಲೆ ತಲಾ 12 ಸಾವಿರ ರೂ. ಸಾಲದ ಹೊರೆ ಇದೆ ಎಂದು ಟೀಕಿಸಿದರು. ಮೇ 20 ರಂದು ರಾಜ್ಯ ಸರ್ಕಾರಕ್ಕೆ ಎರಡು ವರ್ಷಗಳು ತುಂಬಿತು ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡಲು ಮುಂದಾಗಿದೆ. ಯಾವ ಸಾಧನೆಯನ್ನು ಜನರ ಮುಂದಿಟ್ಟು ಸಮಾವೇಶ ನಡೆಸುತ್ತೀರಿ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ ಅನ್ನಭಾಗ್ಯದ ಅಕ್ಕಿಯನ್ನು ಕೇಂದ್ರದಿಂದ ಖರೀದಿ ಮಾಡಲು ರಾಜ್ಯದ ಬಳಿ ಹಣವಿಲ್ಲವೆಂದು ವ್ಯಂಗ್ಯವಾಡಿದರು. ಚನ್ನಪಟ್ಟಣ ಉಪಚುನಾವಣೆ ಕಳೆದ ನಂತರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣವನ್ನೇ ಬಿಡುಗಡೆ ಮಾಡಿಲ್ಲ. ಯುವನಿಧಿ ಯೋಜನೆಯಡಿ ಯಾರಿಗೂ ಇಲ್ಲಿಯವರೆಗೆ ಹಣ ದೊರೆತ್ತಿಲ್ಲ. ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದ ಕೆಎಸ್‍ಆರ್‍ಟಿಸಿ ದಿವಾಳಿಯಾಗಿದೆ. ಚಾಲಕರಿಗೆ ಹಾಗೂ ನಿರ್ವಾಹಕರಿಗೆ ವೇತನ ನೀಡಲು ಕೂಡ ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ. ನಿರ್ವಹಣೆ ಇಲ್ಲದೆ ಕೆಟ್ಟು ನಿಲ್ಲುತ್ತಿರುವ ಬಸ್ ಗಳು ಹಣದ ಕೊರತೆಯಿಂದ ದುರಸ್ತಿ ಕಾಣದೆ ಶೆಡ್ ಸೇರಿವೆ. ವಿದ್ಯಾರ್ಥಿಗಳ ಪ್ರಯಾಣ ಕಷ್ಟಕರವಾಗಿದ್ದು, ಶಾಲೆಗಳು ಆರಂಭವಾದ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಉಚಿತ ವಿದ್ಯುತ್ ಯೋಜನೆಯಿಂದ ವಿದ್ಯುತ್ ನಿಗಮ, ಮಂಡಳಿಗಳು ದಿವಾಳಿಯಾಗಿವೆ, ನೂತನ ವಿದ್ಯುತ್ ಮಾರ್ಗವನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಜಲಜೀವನ್ ಮಿಷನ್ ಯೋಜನೆಗೆ 11 ಕೆವಿ ಅಥವಾ 66 ಕೆವಿ ಮಾರ್ಗವನ್ನು ನಿರ್ಮಿಸಿಕೊಡಲು ಕೂಡ ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬ್ರಾಂಡ್ ಬೆಂಗಳೂರು ಮಳೆಯಲ್ಲಿ ಬೀಚ್ ಬೆಂಗಳೂರಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಎಟಿಎಂ ಆಗಿದೆ, 48 ಅಗತ್ಯ ಸೇವೆಗಳ ಶುಲ್ಕವನ್ನು ಹೆಚ್ಚಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಅಧಿಕವಾಗಿದೆ. ಮೂಡಾ ಸೈಟ್ ಹಗರಣವಾಗಿದೆ, ವಾಲ್ಮೀಕಿ ನಿಗಮದ ಅನುದಾನ ದುರುಪಯೋಗವಾಗಿದೆ, ಪ್ರತಿಷ್ಠಿತ ಸಂಸ್ಥೆಗಳು ಬೆಂಗಳೂರನ್ನು ತೊರೆಯುತ್ತಿವೆ, ಕೇಂದ್ರ ಸರ್ಕಾರ ನೀಡಿದ ಅನುದಾನವನ್ನು ಖರ್ಚು ಮಾಡಿದ ಸಮಗ್ರ ವರದಿಯನ್ನು ಇನ್ನೂ ಕೂಡ ನೀಡಿಲ್ಲ. ರಸ್ತೆಗಳ ನಿರ್ಮಾಣವಾಗುತ್ತಿಲ್ಲ, ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಇದೆಲ್ಲವೂ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಯೇ ಎಂದು ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು. ಕೇವಲ ಮುಖ್ಯಮಂತ್ರಿ ಖುರ್ಚಿ ಉಳಿಸಿಕೊಳ್ಳುವ ಸಾಧನೆಯನ್ನಷ್ಟೇ ಕಳೆದ ಎರಡು ವರ್ಷಗಳಿಂದ ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಮತ್ತು ತಾ.ಪಂ ಚುನಾವಣೆಯನ್ನು ಏಕಕಾಲದಲ್ಲಿ ನಡೆಸಿದರೆ ಕಾಂಗ್ರೆಸ್ ಗೆಲ್ಲುವುದಿಲ್ಲ ಎನ್ನುವುದನ್ನು ಅರಿತಿರುವ ಸರ್ಕಾರ ಇಲ್ಲಿಯವರೆಗೆ ಚುನಾವಣೆ ನಡೆಸಿಲ್ಲ ಎಂದರು. ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣದಲ್ಲಿ ಮೊಕದ್ದಮೆ ಎದುರಿಸುತ್ತಿರುವ ವ್ಯಕ್ತಿಯನ್ನು ರಕ್ಷಣೆ ಮಾಡಿರುವುದು, ಎಸ್ಕಾರ್ಟ್ ನಲ್ಲಿ ಪ್ರಯಾಣ ಮಾಡುತ್ತಿರುವುದು, ಕೊಡಗು ವಿಶ್ವ ವಿದ್ಯಾನಿಲಯವನ್ನು ಮುಚ್ಚಲು ಮುಂದಾಗಿರುದು, ಜಾತಿ ಸಂಘರ್ಷಕ್ಕೆ ಅವಕಾಶ ನೀಡಿರುವುದು, ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ಯೋಜನೆಯನ್ನು ತಾರದೆ ಇರುವುದು ಕೊಡಗಿನ ಇಬ್ಬರು ಶಾಸಕರುಗಳ ಸಾಧನೆಯೇ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ ಬೆಂಗಳೂರಿನ ಉಸಿರಾಗಿರುವ ಕಾವೇರಿ ನೀರನ್ನು ನೀಡುತ್ತಿರುವ ಕೊಡಗು ಜಿಲ್ಲೆಗೆ ರಾಜ್ಯ ಸರ್ಕಾರ ಏನು ಕೊಡುಗೆ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರಿಗೆ ನಿಡುತ್ತಿದ್ದ 4 ಸಾವಿರ ಸಹಾಯ ಧನ, ವಿದ್ಯಾನಿಧಿಯಂತಹ ಉತ್ತಮ ಯೋಜನೆಗಳನ್ನು ಸ್ಥಗಿತಗೊಳಿಸಿರುವ ಈಗಿನ ಸರ್ಕಾರ ರೈತರು ಹಾಗೂ ಪರಿಶಿಷ್ಟರ ವಿರೋಧಿಯಾಗಿದೆ ಎಂದು ಟೀಕಿಸಿದರು. ಕಳೆದ ಎರಡು ವರ್ಷಗಳಲ್ಲಿ ಮಡಿಕೇರಿ ಶಾಸಕರು ತಂದಿರುವ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದರು. ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ರಾಜ್ಯ ಸರ್ಕಾರ ಶೂನ್ಯ ಸಾಧನೆ ಮಾಡಿದ್ದರೂ ಭಾರೀ ಸಾಧನೆ ಮಾಡಿದ್ದೇವೆ ಎಂದು ಪ್ರಚಾರ ಗಿಟ್ಟಿಕೊಳ್ಳುತ್ತಿದೆ. ಕನಿಷ್ಠ 2023-24ನೇ ಸಾಲಿನ 14ನೇ ಹಣಕಾಸು ಆಯೋಗದ ನೆರವಿನ ವಿನಿಯೋಗದ ಮಾಹಿತಿ ನೀಡಿಲ್ಲ, ಇದರಿಂದ ಕೇಂದ್ರದಿಂದ 15ನೇ ಹಣಕಾಸು ಯೋಜನೆಯ ಹಣವನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ನಿತ್ಯ ಕೊಲೆ, ದರೋಡೆ, ಅತ್ಯಾಚಾರ ನಡೆಯುತ್ತಿದ್ದು, ಕೊಡಗು ಇದರಿಂದ ಹೊರತಾಗಿಲ್ಲ. ಜಿಲ್ಲೆಯ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಯಂತ್ತಾಗಿದೆ, ಪೊಲೀಸರು ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರ್ನಾಡಿನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದೆ ಅಧಿಕಾರಿ ದೂರು ನೀಡಬಾರದೆಂದು ಒತ್ತಡ ಹೇರಲಾಗಿದೆ ಎಂದು ಆರೋಪಿಸಿದರು. ಎಲ್ಲಾ ಜನರನ್ನು ಎಲ್ಲಾ ಸಂದರ್ಭದಲ್ಲಿ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ ಹಾಗೂ ನೆಲ್ಲಿರ ಚಲನ್ ಉಪಸ್ಥಿತರಿದ್ದರು.










