ಮಡಿಕೇರಿ ಮೇ 19 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವ ಸರ್ಕಾರವು ಎರಡು ವರ್ಷ ಪೂರೈಸಿ, ನುಡಿದಂತೆ ನಡೆಯುತ್ತಿದ್ದು, ಸರ್ವ ಜನರಿಗೆ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಬಹುಜನರ ಹಿತ ಕಾಪಾಡುವಲ್ಲಿ ಸರ್ಕಾರ ಯಶಸ್ಸಿನತ್ತ ಸಾಗಿದೆ. 2023 ರ ಮೇ 20 ಕ್ಕೆ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷ ಪೂರ್ಣಗೊಂಡು, ಹಲವು ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಎಲ್ಲರ ಮನಃ ಗೆದ್ದಿದೆ. ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಪ್ರಮುಖವಾಗಿದೆ. ಜನವರಿ ತಿಂಗಳಿಗೂ ಮುಂಚೆ ಪಿಡಿಎಸ್‍ನ ಎನ್‍ಎಫ್‍ಎಸ್‍ಎ ಯೋಜನೆಯಡಿ (ಪಿಎಚ್‍ಎಚ್) (ಬಿಪಿಎಲ್) ಪಡಿತರ ಚೀಟಿದಾರರಿಗೆ ಪ್ರತೀ ಯೂನಿಟ್ ಸದಸ್ಯರಿಗೆ 5 ಕೆ.ಜಿ. ಅಕ್ಕಿಯಂತೆ ಉಚಿತವಾಗಿ ವಿತರಿಸಲಾಗುತ್ತಿತ್ತು. ಹಾಗೂ ಆದ್ಯತಾ (ಎಎವೈ) ಪಡಿತರ ಚೀಟಿದಾರರಿಗೆ ಪ್ರತೀ ಪಡಿತರ ಚೀಟಿಗೆ 35 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿತ್ತು. ಜಿಲ್ಲೆಯಲ್ಲಿ 1,10,473 ಪಡಿತರ ಚೀಟಿದಾರರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಸರ್ಕಾರದ ಆದೇಶದಂತೆ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 05 ಕೆ.ಜಿ. ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಗಿಎ ಪ್ರತಿ ತಿಂಗಳು 05 ಕೆ.ಜಿ. ಹೆಚ್ಚುವರಿ ಅಕ್ಕಿಯ ಬದಲಾಗಿ ಜುಲೈ-2023 ರ ಮಾಹೆಯಿಂದ ಡಿಸೆಂಬರ್-2024 ರ ಮಾಹೆಯವರೆಗೆ ಪ್ರತಿ ಕೆ.ಜಿಗೆ. ರೂ.34 ರಂತೆ (34*5 ಕೆ.ಜಿ=170) 170 ರೂ.ಗಳನ್ನು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲಾಗಿದೆ. ಅಂತ್ಯೋದಯ ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಗಳ ಪಡಿತರ ಚೀಟಿಗೆ ಈಗಾಗಲೇ 35 ಕೆ.ಜಿ. ಅಕ್ಕಿಯನ್ನು ಪ್ರತಿ ತಿಂಗಳು ನೀಡುವುದರಿಂದ ಅಂತಹ ಅಂತ್ಯೋದಯ ಪಡಿತರ ಚೀಟಿಗಳಿಗೆ ನೇರ ನಗದು ವರ್ಗಾವಣೆ ಸೌಲಭ್ಯ ಇರುವುದಿಲ್ಲ. ಉಳಿದಂತೆ 4 ಸದಸ್ಯರಿದ್ದರೆ ಈ ಕುಟುಂಬವು ರೂ.170 (34*5*1) ಗಳನ್ನು, 5 ಸದಸ್ಯರನ್ನು ಹೊಂದಿರುವ ಕುಟುಂಬವು ರು.510(34*5*3) ಗಳನ್ನು ಅಥವಾ 06 ಸದಸ್ಯರನ್ನು ಹೊಂದಿರುವ ಕುಟುಂಬವು ರೂ.850(34*5*5) ಗಳನ್ನು ಪಡೆಯುತ್ತದೆ. ಇದಕ್ಕಿಂತ ಹೆಚ್ಚಿನ ಸದಸ್ಯರಿದ್ದಲ್ಲಿ ಇದೇ ಅನುಪಾತವು ಮುಂದುವರೆಯುತ್ತದೆ. ಸರ್ಕಾರದ ಆದೇಶದಂತೆ ಅನ್ನಭಾಗ್ಯ ಡಿಬಿಟಿ ಯೋಜನೆಯ ಬದಲಾಗಿ ಈಗ ವಿತರಣೆ ಮಾಡುತ್ತಿರುವ 5 ಕೆ.ಜಿ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಅಕ್ಕಿಯೊಂದಿಗೆ ಅನ್ನಭಾಗ್ಯ ಹೆಚ್ಚುವರಿ 5 ಕೆ.ಜಿ. ಅಕ್ಕಿಯನ್ನು 2025 ರ ಫೆಬ್ರವರಿ ಮಾಹೆಯಿಂದ ಅನ್ವಯವಾಗುವಂತೆ 10 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.











