
ಮಡಿಕೇರಿ ಮೇ 20 NEWS DESK : ಪೊನ್ನಂಪೇಟೆ ತಾಲ್ಲೂಕು ದೇವರಪುರ ಗ್ರಾಮ ಪಂಚಾಯ್ತಿಗೆ ಸೇರಿರುವ ದೇವರಪುರ ಗ್ರಾಮದಲ್ಲಿ ಸ್ಥಳೀಯರು ಅಯ್ಯಪ್ಪ ಮತ್ತು ಭದ್ರಕಾಳಿ ಹೆಸರಿನಲ್ಲಿ ಕುಂಡೆ-ಬೇಡು (ಕುದುರೆ ಹಬ್ಬ) ಹಬ್ಬವನ್ನು ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದು ಅದರಂತೆ ಈ ವರ್ಷ ಇಂದು (21) ಮತ್ತು 22 ರಂದು ನಡೆಯಲಿದ್ದು, ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೋಕಿನ ತಿತಿಮತಿ, ದೇವರಪುರ, ಪಾಲಿಬೆಟ್ಟ, ಸಿದ್ದಾಪುರ, ಗೋಣಿಕೊಪ್ಪ, ಕಾನೂರು, ಪೊನ್ನಂಪೇಟೆ, ಬಾಳೆಲೆ, ಕುಟ್ಟ ಗ್ರಾಮ ಪಂಚಾಯ್ತಿಗಳಿಗೆ ಒಳಪಡುವ ಪ್ರದೇಶಗಳಲ್ಲಿ ವಾಸಿಸುವ ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ ಮತ್ತು ಎರವ ಹಾಗೂ ಇತರೆ ಜನಾಂಗದ ಪುರುಷರು 5-6 ಜನರ ಗುಂಪು ಸೇರಿಕೊಂಡು ಕೈಗಳಲ್ಲಿ ಸಾಂಪ್ರದಾಯಿಕ ವಸ್ತುಗಳನ್ನು ಮತ್ತು ಇತರೇ ವಸ್ತುಗಳನ್ನು ಹಿಡಿದುಕೊಂಡು ಕುಣಿಯುತ್ತಾ ಹಬ್ಬ ಆಚರಿಸುವ ಪರಿಪಾಠವಿರುತ್ತದೆ. ಈ ಹಬ್ಬದ ಸಂದರ್ಭವನ್ನು ಕೆಲವರು ದುರುಪಯೋಗಪಡಿಸಿಕೊಂಡು ಮಧ್ಯಪಾನ ಮಾಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ಬೈದು, ವಾಹನಗಳನ್ನು ಬಲವಂತವಾಗಿ ಅಡ್ಡಗಟ್ಟಿ ಸಾರ್ವಜನಿಕರಿಂದ ಬಲವಂತವಾಗಿ ದೇವರ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಕಂಡು ಬಂದಿರುತ್ತದೆ. ಇದರಿಂದ ಸಾರ್ವಜನಿಕ ಜನಸಂಚಾರ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಅಯ್ಯಪ್ಪ ಮತ್ತು ಭದ್ರಕಾಳಿ ದೇವರ ಹೆಸರಿನಲ್ಲಿ ಕುಂಡೆ-ಬೇಡು ಹಬ್ಬಕ್ಕೆ(ಕುದುರೆ ಹಬ್ಬ) ಆಗಮಿಸುವ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ, ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿರುತ್ತದೆ. ‘ಬಲವಂತವಾಗಿ ವಾಹನಗಳನ್ನು ತಡೆದು ಸಾರ್ವಜನಿಕರಿಗೆ ಹಣವನ್ನು ನೀಡುವಂತೆ ಒತ್ತಾಯ ಮಾಡಿದರೆ ಹಾಗೂ ವಿನಾಃಕಾರಣ ದೇವರ ಹೆಸರಿನಲ್ಲಿ ಸಾರ್ವಜನಿಕರಿಗೆ ಹಣವನ್ನು ನೀಡುವಂತೆ ಒತ್ತಾಯ ಮಾಡಿ ತೊಂದರೆ ನೀಡಿದರೆ ಅಂತವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.










