
ಮಡಿಕೇರಿ ಮೇ 23 NEWS DESK : ಪಾಕ್ ಪ್ರಚೋದಿತ ಭಯೋತ್ಪಾದಕರ ವಿರುದ್ಧ ನಡೆಸಿದ ಯಶಸ್ವಿ ಆಪರೇಷನ್ ಸಿಂಧೂರಕ್ಕೆ ಕಾರಣೀಭೂತರಾದ ಭಾರತೀಯ ಸೇನೆಯ ಯೋಧರಿಗೆ ಇಂದು ‘ಸಿಂಧೂರ ವಿಜಯೋತ್ಸವ’ದ ಮೂಲಕ ಮಡಿಕೇರಿಯಲ್ಲಿ ಗೌರವವನ್ನು ಸಲ್ಲಿಸಲಾಯಿತು. ಸಿಂಧೂರ ವಿಜಯೋತ್ಸವ ಸಮಿತಿ ವತಿಯಿಂದ ನಡೆದ ಸಿಂಧೂರ ವಿಜಯೋತ್ಸವ ಮೆರವಣಿಗೆಯಲ್ಲಿ ಸುರಿಯುತ್ತಿದ್ದ ಮಳೆಯ ನಡುವೆಯೂ ಸಾವಿರಾರರು ಮಂದಿ ಪಾಲ್ಗೊಂಡಿದ್ದರು. ನಗರದ ಎವಿ ಶಾಲೆಯ ಬಳಿಯ ಬನ್ನಿಮಂಟಪದಿಂದ ಗಾಂಧಿ ಮೈದಾನದವರೆಗೆ ಮೆರವಣಿಗೆ ಸಾಗಿತು. ‘ಭಾರತೀಯ ಸೈನ್ಯಕ್ಕೆ ಕೋಟಿ ಕೋಟಿ ನಮನ’ ಎನ್ನುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ರಾಷ್ಟ್ರಧ್ವಜಗಳೊಂದಿಗೆ ಸಾರ್ವಜನಿಕರು ಮುಂದೆ ಸಾಗಿದರು. ಭಾರತೀಯ ಸೈನ್ಯದ ನಿವೃತ್ತ ಅಧಿಕಾರಿಗಳು ಹಾಗೂ ಸೈನಿಕರು ತಮ್ಮ ಬಿರುದು ಬಾವಲಿಗಳೊಂದಿಗೆ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿದ್ದ 300 ಅಡಿ ಉದ್ದದ ರಾಷ್ಟ್ರಧ್ವಜ ಗಮನ ಸೆಳೆಯಿತು. ಗಾಂಧಿ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಪೆಹಲ್ಗಾಮ್ ನಲ್ಲಿ ಅಮಾಯಕರನ್ನು ಹತ್ಯೆಗೈದು ಮಹಿಳೆಯರ ಸಿಂಧೂರ ಅಳಿಸಿದ ಭಯೋತ್ಪಾದಕರ ನೆಲೆಗಳು ಮತ್ತು ಪಾಕಿಸ್ತಾನದ ಸೇನಾನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ಭಾರತ ಇಂದು ವಿಶ್ವ ಸಮುದಾಯದ ಮುಂದೆ ತಲೆ ಎತ್ತಿ ನಿಂತಿರುವುದು ಹೆಮ್ಮೆ ಎನಿಸಿದೆ ಎಂದರು. ‘ಹೊಟ್ಟೆಕಿಚ್ಚಿನ ಪಾಕಿಸ್ತಾನ’, 1947-48, 1965, 1971ರ ಯುದ್ಧ ಸೇರಿದಂತೆ ಕಾರ್ಗಿಲ್ ಯುದ್ಧದಲ್ಲಿ ಭಾರತದೆದುರು ಹೀನಾಯ ಸೋಲನ್ನು ಕಂಡಿದೆ. ಹೀಗಿದ್ದೂ ಪಾಠ ಕಲಿಯದ ಪಾಕಿಸ್ತಾನ ತನ್ನ ಕುತಂತ್ರಗಳಿಂದ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿ ಭಾರತದ ಅಖಂಡತೆಗೆ ಸವಾಲನ್ನು ಒಡ್ಡುತ್ತಿದೆ. ಪೆಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು, ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಿ ಭಾರತದಲ್ಲಿ ದುಷ್ಕೃತ್ಯವೆಸಗುತ್ತಿದ್ದ ಪಾಕಿಸ್ತಾನಕ್ಕೆ, ಭಾರತೀಯ ಸೈನ್ಯವು ಆಪರೇಷನ್ ಸಿಂಧೂರದ ಮೂಲಕ ಪಾಠ ಕಲಿಸಿದೆ. ಸಮರ್ಥವಾಗಿ ಗಡಿ ಕಾಯುವ ಸೇನಾಪಡೆಗಳಿಂದ ನಾವು ಇಂದು ನೆಮ್ಮದಿಯಿಂದ ಇದ್ದೇವೆ. ಯೋಧರನ್ನು ಗೌರವಿಸುವುದು ಮತ್ತು ಬೆಂಬಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಖ್ಯಾತ ವಾಗ್ಮಿ, ಬೆಂಗಳೂರಿನ ವಿಶ್ವ ಮೋಹನ್ ಪಾಕಿಸ್ತಾನವೆನ್ನುವುದು ಒಂದು ರಣಹೇಡಿ ದೇಶ, ನೇರಾ ನೇರ ಯುದ್ಧಕ್ಕಿಳಿಯದೆ, ತನ್ನೊಳಗೆ ಭಯೋತ್ಪಾದಕರನ್ನು ಪೋಷಿಸಿಕೊಂಡು ಭಾರತದಲ್ಲಿ ದುಷ್ಕೃತ್ಯಗಳನ್ನು ನಿರಂತರವಾಗಿ ನಡೆಸಲು ಮುಂದಾಗುತ್ತಿರುವ ದೇಶಕ್ಕೆ ಆಪರೇಷನ್ ಸಿಂಧೂರದ ಮೂಲಕ ಸ್ಪಷ್ಟ ಸಂದೇಶವನ್ನೇ ರವಾನಿಸಲಾಗಿದೆಯೆಂದು ತಿಳಿಸಿದರು. ಭಯೋತ್ಪಾದಕ ದೇಶ ಪಾಕಿಸ್ತಾನದ ಮೇಲಿನ ಕಾರ್ಯಾಚರಣೆಯ ಸಂಪೂರ್ಣ ಗೌರವ ಭಾರತೀಯ ಸೈನಿಕರಿಗೆ ಸಲ್ಲಬೇಕು. ಕೇಂದ್ರ್ರದ ‘ಆತ್ಮನಿರ್ಭರ ಭಾರತ’ದ ಪರಿಕಲ್ಪನೆಯಂತೆ ಭಾರತವು ತನ್ನ ಸ್ವಸಾಮರ್ಥ್ಯದಿಂದ ನಿರ್ಮಿಸಿರುವ ಶಸ್ತ್ರಾಸ್ತ್ರಗಳಿಂದ ಇಂದು ಪಾಕಿಸ್ತಾನದ ಸೇನಾ ನೆಲೆಗಳನ್ನು ಧ್ವ0ಸಗೊಳಿಸಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಸಿಂಧೂರ ವಿಜಯೋತ್ಸವ ಸಮಿತಿಯ ಸಂಚಾಲಕ ಕೆ.ಕೆ.ದಿನೇಶ್ ಕುಮಾರ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ್ ಚಕ್ಕೇರ ಮನು ಕಾವೇರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿ.ಪಂ ಮಾಜಿ ಅಧ್ಯಕ್ಷ ಬಿ.ಎ.ಹರೀಶ್, ಪ್ರಮುಖರಾದ ಸುವಿನ್ ಗಣಪತಿ, ತಳೂರು ಕಿಶೋರ್ ಕುಮಾರ್, ಕಾಂತಿ ಸತೀಶ್, ಕುಕ್ಕೇರ ಅಜಿತ್, ಬಿ.ಕೆ.ಜಗದೀಶ್, ಆರ್.ಕೆ.ಚಂದ್ರ, ಹೊಸೂರು ಸತೀಶ್ ಕುಮಾರ್, ಸಂಪತ್ ಕುಮಾರ್, ಮಹೇಶ್ ಜೈನಿ ಸೇರಿದಂತೆ ಜಿಲ್ಲಾ ವ್ಯಾಪ್ತಿಯಿಂದ ಆಗಮಿಸಿದ್ದ ಸಹಸ್ರಾರು ಮಂದಿ ಸಿಂಧೂರ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.













