
ಮಡಿಕೇರಿ ಮೇ 23 NEWS DESK : ಕೊಡವಾಮೆ ಬಾಳೋ ಕಾರ್ಯಕ್ರಮದ ಪ್ರಮುಖ ರೂವಾರಿಗಳಲ್ಲಿ ಒಬ್ಬರು ಹಾಗೂ ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರನ್ನು ಚಮ್ಮಟೀರ ಕುಟುಂಬಸ್ಥರು ಸನ್ಮಾನಿಸಿದರು. ಚಮ್ಮಟೀರ ಐನ್ ಮನೆಯಲ್ಲಿ ಕುಟುಂಬದ ಪಟ್ಟೆದಾರ ಡಿಕ್ಕಿ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪ್ರವೀಣ್ ಉತ್ತಪ್ಪ ಅವರನ್ನು ಕುಟುಂಬದ ಪ್ರಮುಖರು ಸನ್ಮಾನಿಸಿ ಗೌರವಿಸಿದರು. ಅಲ್ಲದೆ ಹತ್ತನೆ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಚಮ್ಮಟೀರ ಮನಿಷ್ ಮುದ್ದಪ್ಪ, ಚಮ್ಮಟೀರ ಡೆನ್ ದೇವಯ್ಯ, ಚಮ್ಮಟೀರ ತರುಣ್ ತಿಮ್ಮಯ್ಯ ಅವರಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಚಮ್ಮಟೀರ ಪ್ರವೀಣ್ ಉತ್ತಪ್ಪ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿ, ಹಲವಾರು ಸನ್ಮಾನಗಳು ದೊರೆತಿದ್ದರೂ ಕುಟುಂಬಸ್ಥರಿಂದ ದೊರಕುವ ಸನ್ಮಾನ ಯಾವ ಪ್ರಶಸ್ತಿ ಪುರಸ್ಕಾರಗಳಿಗೂ ಕಡಿಮೆ ಇಲ್ಲ ಎಂದರು. ಪ್ರತಿ ವರ್ಷವೂ ಸಾಧನೆ ಮಾಡಿದ ಇತರ ಸದಸ್ಯರಿಗೆ ಇಂತಹ ಉತ್ತೇಜನ ಅಗತ್ಯ ಇದೆ ಎಂದರು. ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಹಾಗೂ ಅದ್ದೂರಿಯಾಗಿ ಕಾರ್ಯಕ್ರಮ ಮಾಡುವ ಇಂಗಿತ ಕುಟುಂಬ ಸದಸ್ಯರಲ್ಲಿ ವ್ಯಕ್ತವಾಯಿತು.










