
ಸೋಮವಾರಪೇಟೆ ಮೇ 24 NEWS DESK : ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಸೋಮವಾರಪೇಟೆ ಸ್ಥಳೀಯ ಸಂಸ್ಥೆಯ ಮಾಸಿಕ ಸಭೆ ಸಾಹಿತ್ಯ ಭವನದಲ್ಲಿ ನಡೆಯಿತು. ಅಧ್ಯಕ್ಷ ಎಸ್.ಡಿ.ವಿಜೇತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜೂ.5 ರಂದು ಪರಿಸರ ದಿನಾಚರಣೆಯನ್ನು ಆಚರಿಸುವ ಬಗ್ಗೆ ಚರ್ಚಿಸಲಾಯಿತು. ಜೂ.5 ರಂದು ಬೆಳಗ್ಗೆ ಸೋಮವಾರಪೇಟೆಯ ಆರ್.ಎಂ. ಸಿ ಯಲ್ಲಿ ಗಿಡ ನೆಡುವ ಕಾರ್ಯಕ್ರಮ, ಜೊತೆಗೆ ಸೋಮವಾರಪೇಟೆಯ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಗೆ ಪೂರಕವಾಗುವ ಅಂಶಗಳ ಬಗ್ಗೆ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಪರಿಸರ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಜವಾಬ್ದಾರಿ’ ಕುರಿತು ಒಂದು ಗಂಟೆ ಕಾಲಾವಧಿಯಲ್ಲಿ ಪ್ರಬಂಧ ಬರೆಯುವುದು. ಈ ಸ್ಪರ್ಧೆಯನ್ನು ಸೋಮವಾರಪೇಟೆಯ ಚೆನ್ನಬಸಪ್ಪ ಹಾಲಿನಲ್ಲಿ ನಡೆಸಲು ತೀರ್ಮಾನಿಸಲಾಯಿತು. ನಂತರ ಸಮಾರೋಪ ಕಾರ್ಯಕ್ರಮದಲ್ಲಿ, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಜ್ಯೋತಿ ಅರುಣ್, ಉಪಾಧ್ಯಕ್ಷ ಎಸ್.ಎಂ.ಡಿಸಿಲ್ವಾ, ಮಾಜಿ ಅಧ್ಯಕ್ಷ ಬಿ.ಎ.ಭಾಸ್ಕರ್, ಪದಾಧಿಕಾರಿಗಳಾದ ಜೋಕಿವಾಸ್, ಎ.ಪಿ.ವೀರರಾಜು, ಸಿ.ಎಸ್.ನಾಗರಾಜು, ವಸಂತಿ ಮತ್ತಿತರರು ಇದ್ದರು.









