
ಮಡಿಕೇರಿ ಮೇ 24 NEWS DESK : ಅಪ್ಪಂಗಳ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರಕ್ಕೆ ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಕುರಿತ ಸಂಸದೀಯ ಸ್ಥಾಯಿ ಸಮಿತಿ ಭೇಟಿ ನೀಡಿತು. ಲೋಕಸಭಾದ 12 ಸದಸ್ಯರು, ರಾಜ್ಯಸಭೆಯ 4 ಸದಸ್ಯರು ಮತ್ತು ಲೋಕಸಭಾ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ನಿಯೋಗವು ಐಸಿಎಆರ್-ಐಐಎಸ್‍ಆರ್ ಅಭಿವೃದ್ಧಿಪಡಿಸಿದ ಸಂಬಾರ ಬೆಳೆಗಳ ತಳಿಗಳು ಮತ್ತು ತಂತ್ರಜ್ಞಾನಗಳ ವಸ್ತು ಪ್ರದರ್ಶನವನ್ನು ವೀಕ್ಷಿಸಿತು. ಲೋಕಸಭೆಯ ಸಂಸದ ಚರಣ್ ಜಿತ್ ಸಿಂಗ್ ಚನ್ನಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ನಂತರ ನಡೆದ ಸಭೆಯಲ್ಲಿ ಕೋಜಿಕೋಡ್ ಐಸಿಎಆರ್-ಐಐಎಸ್‍ಆರ್ ನಿರ್ದೇಶಕ ಡಾ. ಆರ್.ದಿನೇಶ್ ಸಂಸ್ಥೆಯ ಚಟುವಟಿಕೆಗಳು ಮತ್ತು ಸಾಧನೆಗಳ ಸಮಗ್ರ ಮಾಹಿತಿ ನೀಡಿದರು. ಸಮಿತಿಯು ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ನವದೆಹಲಿ ಐಸಿಎಆರ್ ಸಹಾಯಕ ಮಹಾನಿರ್ದೇಶಕರಾದ ಡಾ. ಸುಧಾಕರ್ ಪಾಂಡೆ, ಅಪ್ಪಂಗಳ ಐಸಿಎಆರ್-ಐಐಎಸ್‍ಆರ್ ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎಸ್.ಜೆ.ಅಂಕೇಗೌಡ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. ಪ್ರಗತಿಪರ ರೈತ ಮಹಿಳೆ ಪ್ರೇಮಾ ಗಣೇಶ್ ಸಂಬಾರ ಬೆಳೆಗಳ ಕೃಷಿಯಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.










