
ಮಡಿಕೇರಿ ಮೇ 26 NEWS DESK : ರಾಷ್ಟ್ರೀಯ ಜನಗಣತಿಯ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಟಿ.ಶೆಟ್ಟಿಗೇರಿಯಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಿತು. ಧಾರಾಕಾರ ಮಳೆಯ ನಡುವೆ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಟಿ.ಶೆಟ್ಟಿಗೇರಿ ಜಂಕ್ಷನ್ ನಲ್ಲಿ ಮಾನವ ಸರಪಳಿ ನಿರ್ಮಿಸಿದ ಸದಸ್ಯರು ಜನಗಣತಿಯ ಸಂದರ್ಭ ಪ್ರತ್ಯೇಕ ಕಾಲಮ್ ಮತ್ತು ಕೋಡ್ ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಹಕ್ಕೊತ್ತಾಯ ಮಂಡಿಸಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು ಪ್ರಸ್ತುತ ಜನಗಣತಿ ಸಂದರ್ಭ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಸೇರಿಸಿದರೆ ಕೊಡವ ಸಮುದಾಯದ ನಿಖರವಾದ ಪ್ರಾತಿನಿಧ್ಯವನ್ನು ಖಚಿತಪಡಿಸಬಹುದು. ಸರ್ಕಾರ ಕೊಡವ ಸಮುದಾಯದ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸೋಶಿಯಲ್ ಇಂಜಿನಿಯರಿಂಗ್ ಮೂಲಕ ಅವರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಉದ್ದೇಶಿತ ನೀತಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಕೊಡವ ಸಮುದಾಯದ ವಿಶಿಷ್ಟ ಗುರುತನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದರು. 2025-26ರ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮಸಂಜಾತ ಕೊಡವರಿಗೆ ಪ್ರತ್ಯೇಕ “ಕೋಡ್ ಮತ್ತು ಕಾಲಮ್” ಅನ್ನು ಸೇರಿಸಲು ಕೇಂದ್ರ ಗೃಹ ಮಂತ್ರಾಲಯ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯೋಗ ನಮ್ಮ ಬೇಡಿಕೆಯನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು. 1871-72 ರಿಂದ 1931 ರವರೆಗೆ ಜನಗಣತಿಯು ನಿಖರ ಮತ್ತು ವೈಜ್ಞಾನಿಕವಾಗಿತ್ತು. ಕೊಡವರನ್ನು ಕೊಡವಲ್ಯಾಂಡ್‍ನ ಏಕ-ಜನಾಂಗೀಯ, ಆನಿಮಿಸ್ಟಿಕ್, ಆದಿಮಸಂಜಾತ ಯೋಧ ಕುಲವೆಂದು ಗುರುತಿಸಿತು. ಈ ಮನ್ನಣೆ ಕೊಡವ ಸಮುದಾಯದ ಜನಾಂಗೀಯ ವಂಶಾವಳಿಯನ್ನು ದೃಢಪಡಿಸಿತು. ಸಿಕ್ಕಿಂನಲ್ಲಿ ಬೌದ್ಧ ಬಿಕ್ಷುಗಳಿಗಾಗಿ ನೀಡಿದ “ಸಂಘ” ಮತಕ್ಷೇತ್ರದಂತೆ 2026 ರ ಕ್ಷೇತ್ರ ಪುನರ್ವಿಂಗಡಣೆಯ ಸಮಯದಲ್ಲಿ ಕೊಡವರಿಗೂ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ರಚಿಸಬೇಕು. ಇದು ಕಡ್ಡಾಯ ಕುಟುಂಬ ಯೋಜನೆಯ ಪರಿಪಾಲನೆ, ರಾಷ್ಟ್ರದ ಭದ್ರತೆಗಾಗಿ ಸೇನಾಕ್ಷೇತ್ರದ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡವ ಸಮುದಾಯ ನೀಡಿದ ಕೊಡುಗೆಗೆ ನೀಡುವ ಅಮೋಘ ಕೊಡುಗೆಯಾಗುತ್ತದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು. ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗಾಗಿ ಕಳೆದ 35 ವರ್ಷಗಳಿಂದ ನಿರಂತರ ಮತ್ತು ಶಾಂತಿಯುತವಾಗಿ ಸಿಎನ್‍ಸಿ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಈ ಬೇಡಿಕೆ ಪರ ಕರ್ನಾಟಕ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಅದರ ವಿಚಾರಣೆ ಮುಂದುವರೆಯುತ್ತಿದೆ ಎಂದರು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‍ಟಿ) ಟ್ಯಾಗ್ ನೀಡಬೇಕು, ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಆದಿಮಸಂಜಾತ ಸಮಾವೇಶದ ಅಡಿಯಲ್ಲಿ ಮಾನ್ಯತೆಯನ್ನು ಕಲ್ಪಿಸಬೇಕು, ಹೊರಗಿನ ಆಡಳಿತಗಾರರು ವಶಪಡಿಸಿಕೊಂಡ, ಬಂಡವಾಳಶಾಹಿಗಳಿಗೆ ಅಡಮಾನವಿಟ್ಟ, ಭೋಗ್ಯಕ್ಕೆ ನೀಡಿದ ಮತ್ತು ಮಾರಾಟ ಮಾಡಿದ ಕೊಡವರ ಪೂರ್ವಾರ್ಜಿತ ಅನುವಂಶಿಕ ಭೂ ಹಕ್ಕುಗಳನ್ನು ಮರುಸ್ಥಾಪಿಸಬೇಕು, ಸಾಂಪ್ರದಾಯಿಕ ತಾಯ್ನಾಡಿನಲ್ಲಿ ಕೊಡವರ ಐತಿಹಾಸಿಕ ನಿರಂತರತೆಯ ಶಾಸನಬದ್ಧ ಅನುಮೋದನೆಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು. ಕಲ್ಯಾಣ ರಾಜ್ಯ ಚೌಕಟ್ಟಿನೊಳಗೆ ಕೊಡವ ಸಮುದಾಯದ ಗುರುತು ಮತ್ತು ಅಸ್ತಿತ್ವವನ್ನು ದೃಢೀಕರಿಸಲು ಸರಿಯಾದ ಜನಗಣತಿ ನಿರ್ಣಾಯಕವಾಗಿದೆ. ಈ ಬೇಡಿಕೆಗಳ ಮೂಲಕ ಕೊಡವರ ಸಮಗ್ರ ಸಬಲೀಕರಣವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
*ಜೂ.2 ರಂದು ಬಾಳೆಲೆಯಲ್ಲಿ ಜಾಗೃತಿ* :: ಜನಗಣತಿಯ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕೆಂದು ಒತ್ತಾಯಿಸಿ ಜೂ.2 ರಂದು ಬೆಳಿಗ್ಗೆ 10.30 ಗಂಟೆಗೆ ಬಾಳೆಲೆಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.
ಅಜ್ಜಮಾಡ ಸಾವಿತ್ರಿ, ಅಪ್ಪಚಂಗಡ ಮೋಟಯ್ಯ, ಚೊಟ್ಟೆಯಂಡಮಾಡ ಉದಯ, ಬೊಟ್ಟಂಗಡ ಗಿರೀಶ್, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅಜ್ಜಮಾಡ ಚಿಮ್ಮ, ಚಟ್ಟಂಗಡ ರೇಣು, ಕಾಳಿಮಾಡ ಕಿರಣ್, ಉಳುವಂಗಡ ಉದಯ, ಚಟ್ಟಂಗಡ ಸೋಮಣ್ಣ, ಮಾಣಿರ ಮನು, ಚೊಟ್ಟೆಯಂಡಮಾಡ ಸತೀಶ್, ಮಾಣಿರ ಪ್ರವೀಣ್, ಆಂಡಮಾಡ ಧನು, ಚಂಗುಲಂಡ ರಾಜಪ್ಪ, ಮಾಣಿರ ಸಂಪತ್, ಚಟ್ಟಂಗಡ ಗಿಣಿ, ಬಲ್ಯಮಿದೇರಿರ ಸುಬ್ಬಯ್ಯ, ಮುಕ್ಕಾಟಿರ ವಿನಯ್, ಮುಕ್ಕಾಟಿರ ತಿಲಕ್, ಚೊಟ್ಟೆಯಂಡಮಾಡ ಪೂಣಚ್ಚ, ಚೊಟ್ಟೆಯಂಡಮಾಡ ನಾಚಪ್ಪ, ಚಿಮ್ಮುಣಿರ ಸುಬ್ರಮಣಿ, ಮಚ್ಚಮಾಡ ಮುತ್ತಪ್ಪ, ಮುಚ್ಚಮಾಡ ಸುಧಾ, ಚೊಟ್ಟೆಯಂಡ ಮಾಡ ಕಿರಣ್ ಮಾಚಯ್ಯ, ಚೊಟ್ಟೆಯಂಡಮಾಡ ಮಂಜು ದೇವಯ್ಯ, ಮಾಂಗೇರ ನಾಣಯ್ಯ, ಚೊಟ್ಟೆಯಂಡಮಾಡ ಮುದ್ದಯ್ಯ, ಚೊಟ್ಟೆಯಂಡಮಾಡ ಪ್ರಜಾ, ಬೊಟ್ಟಂಗಡ ಶರತ್, ಚಂಗುಲಂಡ ಬಿ.ಮೇದಪ್ಪ, ಪೊಕ್ಕೊಳಂಗಡ ಕಾಶಿ ಪೊನ್ನಪ್ಪ, ಮಾಂಗೇರ ಕೇಶು ಬೆಳ್ಯಪ್ಪ, ಕಾಂಡೇರ ಸುರೇಶ್, ಅಪ್ಪೆಯಂಗಡ ಮಾಲೆ, ಕಿರಿಯಮಾಡ ಶೆರಿನ್, ಜಮ್ಮಡ ಮೋಹನ್, ಮೀದೆರಿರ ಜಪ್ಪು ಮತ್ತಿತರರು ಪಾಲ್ಗೊಂಡಿದ್ದರು.








