ಮಡಿಕೇರಿ NEWS DESK ಮೇ 27 : ಕೊಡಗು ಜಿಲ್ಲೆಯಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಮರ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅಮ್ಮತ್ತಿ ಹೋಬಳಿ ಬಾಡಗ ಬಾಣಂಗಾಲ ಗ್ರಾಮದ ಜನತಾ ಕಾಲೋನಿಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಪಿ.ಸಿ.ವಿಷ್ಣು ಬೆಳ್ಳಿಯಪ್ಪ (65) ಎಂಬುವವರೇ ಮೃತ ದುರ್ದೈವಿ. ಇಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ ವಿಷ್ಣು ಬೆಳ್ಳಿಯಪ್ಪ ಅವರ ಮೇಲೆ ಮಾವಿನ ಮರ ಬಿದ್ದಿದೆ. ತಕ್ಷಣ ಇವರನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಮರಣ ಹೊಂದಿದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಗ್ರೇಡ್ 2 ತಹಶೀಲ್ದಾರರು, ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.











