
ಮಡಿಕೇರಿ ಮೇ 28 NEWS DESK : ಮುಂಬರುವ ಚುನಾವಣೆಯ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ವಲಯಗಳಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ಕೆಪಿಸಿಸಿಯ ಆದೇಶದ ಮೇರೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜಿಲ್ಲೆಯ ಆರು ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಗೆ ಡಿಸಿಸಿಯಿಂದ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರ ಆದೇಶದ ಮೇರೆಗೆ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್, ಡಿಸಿಸಿ ಉಪಾಧ್ಯಕ್ಷ ಸಾಜು ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ವಿ.ಪಿ.ಸುರೇಶ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್‍ದಾಸ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್ ಕಾರ್ಯನ್ಮಖರಾಗಿದ್ದಾರೆ. ಉಸ್ತುವಾರಿಗಳು ಆಯ ವಲಯಗಳಿಗೆ ಭೇಟಿ ನೀಡಿ ಪಕ್ಷದ ಹಿರಿಯ ಹಾಗೂ ಪ್ರಾಮಾಣಿಕ ಕಾರ್ಯಕರ್ತರನ್ನು ಗುರುತಿಸಿ ವಲಯ ಸಮಿತಿಗಳನ್ನು ರಚಿಸುವುದು ಅಥವಾ ಹಾಲಿ ಇರುವ ಅಧ್ಯಕ್ಷರುಗಳನ್ನು ನೇಮಿಸುವಲ್ಲಿ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಲು ಧರ್ಮಜ ಉತ್ತಪ್ಪ ಸೂಚನೆ ನೀಡಿದ್ದಾರೆ. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎ.ಹಂಸ ಅವರ ಅಧ್ಯಕ್ಷತೆಯಲ್ಲಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ 8 ವಲಯ ಮತ್ತು ಮಡಿಕೇರಿ ನಗರದಲ್ಲಿ ಸಭೆ ನಡೆಯಲಿದೆ. ಡಿಸಿಸಿ ಸೂಚನೆಯಂತೆ ಗಾಳಿಬೀಡು ವಲಯದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಸಮಿತಿ ರಚಿಸಲಾಯಿತು. ಮರಗೋಡು ವಲಯ ಹಾಗೂ ಹೊಸ್ಕೇರಿ ವಲಯದಲ್ಲಿ ಸಭೆ ನಡೆಯಿತು. ಮುಂದೆ ಮಕ್ಕಂದೂರು, ಕೆ.ನಿಡುಗಣೆ, ಕಡಗದಾಳು, ಕಾಂತೂರು-ಮೂರ್ನಾಡು, ಹೊದ್ದೂರಿನ ವಲಯದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದ್ದು, ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಸರಕಾರದ ಗ್ಯಾರಂಟಿ ಯೋಜನೆ ಹಾಗೂ ಕಾಮಗಾರಿ ಅಭಿವೃದ್ಧಿ ಕೆಲಸಗಳ ಬಗ್ಗೆ ಮನವರಿಕೆ ಮಾಡಿ ಕೊಡಲಾಗುತ್ತದೆ.









