

ನವದೆಹಲಿ NEWS DESK ಮೇ 30 : ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಎನ್.ವಿ.ಅಂಜಾರಿಯಾ, ವಿಜಯ್ ಬಿಷ್ಣೋಯ್ ಹಾಗೂ ಎ.ಎಸ್.ಚಂದೂರ್ಕರ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು. ಸಿಜೆಐಯಾಗಿದ್ದ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ ಮತ್ತು ಬೆಲಾ ತ್ರಿವೇದಿ ಅವರು ಇತ್ತೀಚೆಗೆ ನಿವೃತ್ತಿ ಹೊಂದಿದ್ದರು. ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೂವರು ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದರು. ಮೂವರು ನೂತನ ನ್ಯಾಯಾಧೀಶರ ಪ್ರಮಾಣ ವಚನ ಸ್ವೀಕಾರದೊಂದಿಗೆ ಒಟ್ಟು 34 ನ್ಯಾಯಮೂರ್ತಿಗಳ ಸಂಖ್ಯಾಬಲದ ಸರ್ವೋಚ್ಚ ನ್ಯಾಯಾಲಯ ಸಂಪೂರ್ಣ ಸದಸ್ಯರೊಂದಿಗೆ ಕಾರ್ಯನಿರ್ವಹಿಸಲಿದೆ.








