ಸೋಮವಾರಪೇಟೆ, NEWS DESK ಅ.15: ಕಾವೇರಿ ತೀರ್ಥೋದ್ಭವದ ಪ್ರಯುಕ್ತ ಕೊಡ್ಲಿಪೇಟೆಯ ನಂದಿಪುರ ಕೆರೆ ಆವರಣದ ನೇಸರ ಉದ್ಯಾನದಲ್ಲಿ ಅಕ್ಟೋಬರ್ 17ರಂದು ಕಾವೇರಿ ಆರತಿ ಹಾಗೂ ಬಾಗಿನ ಅರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಚಂದ್ರಮೌಳಿ ತಿಳಿಸಿದ್ದಾರೆ.
ಶನಿವಾರ ಅಪರಾಹ್ನ 3 ಗಂಟೆಯಿಂದ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಸಂಜೆ 4 ಗಂಟೆಗೆ ಬೆಂಗಳೂರಿನ ಹೆಸರಾಂತ ಅಂತರಂಗ ಬಹಿರಂಗ ನಾಟಕ ತಂಡದ ವತಿಯಿಂದ ಖ್ಯಾತ ರಂಗಕರ್ಮಿ ಭೀಷ್ಮ ರಾಮಯ್ಯ ಅವರ ನೇತೃತ್ವದಲ್ಲಿ ‘ಭಾಯಿ ಬಡಕಿ’ ನಾಟಕ ಪ್ರದರ್ಶನ ನಡೆಯಲಿದೆ.
ಸಂಜೆ 6 ಗಂಟೆಗೆ ಗಣಪತಿ ದೇವಾಲಯದಿಂದ ನಂದಿಧ್ವಜ ಹಾಗೂ ಪೂರ್ಣಕುಂಭಗಳೊಂದಿಗೆ ಮೆರವಣಿಗೆ ನಡೆಯಲಿದೆ. ಸಂಜೆ 6.30ಕ್ಕೆ ಚಿಕ್ಕಮಗಳೂರಿನ ಶ್ರೀ ದೇವಿ ಗುರುಕುಲದ ಮಾತೆಯರಿಂದ ರುದ್ರಪಠಣ ಹಾಗೂ ಭಜನೆ ನಡೆಯಲಿದ್ದು, ಯಜುರ್ವೇದ ವಿದ್ವಾಂಸ ಶ್ರೀ ಶರತ್ ಶಾಸ್ತ್ರಿ ಮತ್ತು ತಂಡದವರಿಂದ ಕಾವೇರಿ ಆರತಿ ನೆರವೇರಲಿದೆ.
ರಾತ್ರಿ 7.55ಕ್ಕೆ ಕಾವೇರಿ ತೀರ್ಥೋದ್ಭವದ ಸಮಯದಲ್ಲಿ ನಂದಿಪುರ ಕೆರೆಗೆ ಬಾಗಿನ ಅರ್ಪಿಸಲಾಗುವುದು. ಬಳಿಕ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ.
ಈ ಭಕ್ತಿಪೂರ್ವಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾವೇರಿ ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಚಂದ್ರಮೌಳಿ ಮನವಿ ಮಾಡಿದ್ದಾರೆ.

















