
ಮಡಿಕೇರಿ ಜೂ.2 NEWS DESK : ರಾಷ್ಟ್ರೀಯ ಜನಗಣತಿಯ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ನ್ನು ಅಳವಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬಾಳೆಲೆಯಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಸಿತು. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಬಾಳೆಲೆಯಲ್ಲಿ ಮಾನವ ಸರಪಳಿ ನಿರ್ಮಿಸಿದ ಸದಸ್ಯರು ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು ಕೊಡವಲ್ಯಾಂಡ್ ನ ರಕ್ಷಣೆಗಾಗಿ 2025-26ರ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮಸಂಜಾತ ಕೊಡವರಿಗೆ ಪ್ರತ್ಯೇಕ “ಕೋಡ್ ಮತ್ತು ಕಾಲಮ್” ಅನ್ನು ಸೇರಿಸಲು ಕೇಂದ್ರ ಗೃಹ ಮಂತ್ರಾಲಯ ರಿಜಿಸ್ಟ್ರಾರ್ ಜನರಲ್ ಮತ್ತು ಭಾರತದ ಜನಗಣತಿ ಆಯೋಗ ನಮ್ಮ ಬೇಡಿಕೆಯನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು. ಪ್ರಸ್ತುತ ಜನಗಣತಿ ಸಂದರ್ಭ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಸೇರಿಸಿದರೆ ಕೊಡವ ಸಮುದಾಯದ ನಿಖರವಾದ ಪ್ರಾತಿನಿಧ್ಯವನ್ನು ಖಚಿತಪಡಿಸಬಹುದು. ಸರ್ಕಾರ ಕೊಡವ ಸಮುದಾಯದ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸೋಶಿಯಲ್ ಇಂಜಿನಿಯರಿಂಗ್ ಮೂಲಕ ಅವರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಉದ್ದೇಶಿತ ನೀತಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಕೊಡವ ಸಮುದಾಯದ ವಿಶಿಷ್ಟ ಗುರುತನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದರು. 1871-72 ರಿಂದ 1931 ರವರೆಗೆ ಜನಗಣತಿಯು ನಿಖರ ಮತ್ತು ವೈಜ್ಞಾನಿಕವಾಗಿತ್ತು. ಕೊಡವರನ್ನು ಕೊಡವಲ್ಯಾಂಡ್‍ನ ಏಕ-ಜನಾಂಗೀಯ, ಆನಿಮಿಸ್ಟಿಕ್, ಆದಿಮಸಂಜಾತ ಯೋಧ ಕುಲವೆಂದು ಗುರುತಿಸಿತು. ಈ ಮನ್ನಣೆ ಕೊಡವ ಸಮುದಾಯದ ಜನಾಂಗೀಯ ವಂಶಾವಳಿಯನ್ನು ದೃಢಪಡಿಸಿತು. ಸಿಕ್ಕಿಂನಲ್ಲಿ ಬೌದ್ಧ ಬಿಕ್ಷುಗಳಿಗಾಗಿ ನೀಡಿದ “ಸಂಘ” ಮತಕ್ಷೇತ್ರದಂತೆ 2026 ರ ಕ್ಷೇತ್ರ ಪುನರ್ವಿಂಗಡಣೆಯ ಸಮಯದಲ್ಲಿ ಕೊಡವರಿಗೂ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ರಚಿಸಬೇಕು. ಇದು ಕಡ್ಡಾಯ ಕುಟುಂಬ ಯೋಜನೆಯ ಪರಿಪಾಲನೆ, ರಾಷ್ಟ್ರದ ಭದ್ರತೆಗಾಗಿ ಸೇನಾಕ್ಷೇತ್ರದ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡವ ಸಮುದಾಯ ನೀಡಿದ ಕೊಡುಗೆಗೆ ನೀಡುವ ಅಮೋಘ ಕೊಡುಗೆಯಾಗುತ್ತದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟರು. ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಗಾಗಿ ಕಳೆದ 35 ವರ್ಷಗಳಿಂದ ನಿರಂತರ ಮತ್ತು ಶಾಂತಿಯುತವಾಗಿ ಸಿಎನ್‍ಸಿ ಸಂಘಟನೆ ಹೋರಾಟ ನಡೆಸುತ್ತಾ ಬಂದಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಈ ಬೇಡಿಕೆ ಪರ ಕರ್ನಾಟಕ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಅದರ ವಿಚಾರಣೆ ಮುಂದುವರೆಯುತ್ತಿದೆ ಎಂದರು. ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡವ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‍ಟಿ) ಟ್ಯಾಗ್ ನೀಡಬೇಕು, ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಆದಿಮಸಂಜಾತ ಸಮಾವೇಶದ ಅಡಿಯಲ್ಲಿ ಮಾನ್ಯತೆಯನ್ನು ಕಲ್ಪಿಸಬೇಕು, ಹೊರಗಿನ ಆಡಳಿತಗಾರರು ವಶಪಡಿಸಿಕೊಂಡ, ಬಂಡವಾಳಶಾಹಿಗಳಿಗೆ ಅಡಮಾನವಿಟ್ಟ, ಭೋಗ್ಯಕ್ಕೆ ನೀಡಿದ ಮತ್ತು ಮಾರಾಟ ಮಾಡಿದ ಕೊಡವರ ಪೂರ್ವಾರ್ಜಿತ ಅನುವಂಶಿಕ ಭೂ ಹಕ್ಕುಗಳನ್ನು ಮರುಸ್ಥಾಪಿಸಬೇಕು, ಸಾಂಪ್ರದಾಯಿಕ ತಾಯ್ನಾಡಿನಲ್ಲಿ ಕೊಡವರ ಐತಿಹಾಸಿಕ ನಿರಂತರತೆಯ ಶಾಸನಬದ್ಧ ಅನುಮೋದನೆಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು. ಕಲ್ಯಾಣ ರಾಜ್ಯ ಚೌಕಟ್ಟಿನೊಳಗೆ ಕೊಡವ ಸಮುದಾಯದ ಗುರುತು ಮತ್ತು ಅಸ್ತಿತ್ವವನ್ನು ದೃಢೀಕರಿಸಲು ಸರಿಯಾದ ಜನಗಣತಿ ನಿರ್ಣಾಯಕವಾಗಿದೆ. ಈ ಬೇಡಿಕೆಗಳ ಮೂಲಕ ಕೊಡವರ ಸಮಗ್ರ ಸಬಲೀಕರಣವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು. ನಗರೀಕರಣ, ಭೂಪರಿವರ್ತನೆ ಮತ್ತು ರೆಸಾರ್ಟ್ ಮಾಫಿಯಗಳಿಂದ ಕೊಡವ ಲ್ಯಾಂಡ್ ಎಗ್ಗಿಲ್ಲದೆ ಮಾರಾಟವಾಗುವ ಸರಕಾಗಿದೆ. ಆದಿಮಸಂಜಾತ ಕೊಡವರ ಕೊಡವ ಲ್ಯಾಂಡ್ ನ ರಕ್ಷಣೆಗೆ ಪ್ರತ್ಯೇಕ “ಕೋಡ್ ಮತ್ತು ಕಾಲಮ್” ನ ಅಗತ್ಯವಿದೆ. ಆ ಮೂಲಕ ಜನಗಣತಿಯಲ್ಲಿ ಕೊಡವರನ್ನು ಗುರುತಿಸಿದರೆ ಸ್ವಯಂ ನಿರ್ಣಯದ ಹಕ್ಕು ಮತ್ತು ರಾಜ್ಯಾಂಗ ದತ್ತ ಹಕ್ಕು ಖಾತರಿಯಾಗಲಿದೆ ಎಂದು ಎನ್.ಯು.ನಾಚಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಪ್ರತಿ ಗ್ರಾಮಗಳಲ್ಲಿ ಇಂದು ಹತ್ತು-ಹದಿನೈದು ರೆಸಾರ್ಟ್‍ಗಳು ತಲೆಎತ್ತಿವೆ. ಕೊಡವ ಲ್ಯಾಂಡ್ ಪ್ರದೇಶವನ್ನು ನಗರೀಕರಣ ಮಾಡಲು ಹೊರಗಿನ ಹೂಡಿಕೆದಾರರನ್ನು ಆಕರ್ಷಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ನಾವು ಸುರಕ್ಷಿತವಾಗಬೇಕಾದರೆ ಕೊಡವ ಲ್ಯಾಂಡ್ ಗೆ ಪೂರಕವಾದ ಜಾತಿಗಣತಿ ಸಹಕಾರಿ ಎಂದು ಅಭಿಪ್ರಾಯಪಟ್ಟರು. ಜಾತಿವಾರು ಮಾಹಿತಿ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದು ಉತ್ತಮ ಬೆಳವಣಿಗೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ. ಅವರು ದೆಹಲಿಯಲ್ಲಿ ಜನಗಣತಿ ಮತ್ತು ಜಾತಿವಾರು ಸಮೀಕ್ಷೆ ಸಂಬಂಧ ಪೂರ್ವ ತಯಾರು ತಾಲಿಮು ಮಾಡಲು ಅಂಕಿಅಂಶಗಳ ಇಲಾಖೆಯಲ್ಲಿ ಸಿಬ್ಬಂದಿಗಳ ಉದ್ದೇಶಿಸಿ ಮಾತನಾಡಿದ್ದಾರೆ. ವಿಭಿನ್ನ ಸಂಸ್ಕೃತಿಯ ವೈವಿಧ್ಯಮಯ ಜನಾಂಗೀಯ ಹಿನ್ನೆಲೆಯನ್ನು ಹೊಂದಿರುವ ಈ ದೇಶದಲ್ಲಿ ಎಲ್ಲಾ ಜನಾಂಗವನ್ನು ಸರಿಯಾಗಿ ಸಮೀಕ್ಷೆ ಮಾಡಿ ಸಂವಿಧಾನ ಬದ್ಧತೆಯನ್ನು ಅನುಷ್ಠಾನ ಮಾಡಿ ಸಮ ಸಮಾಜವನ್ನು ನಿರ್ಮಾಣ ಮಾಡಲು ಜಾಗತಿಗಣತಿ ಅತೀ ಅವಶ್ಯಕ ಎಂದು ಹೇಳಿದ್ದಾರೆ. ಉಪರಾಷ್ಟ್ರಪತಿಗಳ ಈ ಮಹತ್ವದ ಹೇಳಿಕೆಯನ್ನು ಸ್ವಾಗತಿಸುವುದಾಗಿ ನಾಚಪ್ಪ ತಿಳಿಸಿದರು. ಕೊಡವರು ಈ ದೇಶದ ಜನಾಂಗೀಯ ಹೆಗ್ಗುರುತಿನ ಪ್ರಧಾನ ಅಂಗ. ಅವರ ಸೋಶಿಯಲ್ ಇಂಜಿನಿಯರಿಂಗ್ ಕೂಡ ಜಾತಿ ಗಣತಿಯಲ್ಲಿ ಆಗಬೇಕಾಗುತ್ತದೆ. ಅದಕ್ಕೆ ಈ ಸಮೀಕ್ಷೆ ಸಹಕಾರಿಯಾಗಲಿದೆ ಎಂದು ಹೇಳಿದರು. ಕೊಡಗು ಮಾರಾಟಕ್ಕಿಟ್ಟ ಸರಕಾಗಿದೆ, ಇದನ್ನು ತಡೆಯಲು ಕೊಡವರು ರಾಜ್ಯಾಂಗದತ್ತ ಹಕ್ಕಿನ ಮೂಲಕ ಸಬಲೀಕರಣಗೊಳ್ಳಬೇಕಾಗಿದೆ. ಇದಕ್ಕಾಗಿ ಜಾತಿವಾರು ಸಮೀಕ್ಷೆಯಲ್ಲಿ ಕೊಡವರಿಗೆ ಪ್ರತ್ಯೇಕ ‘ಕಾಲಮ್ ಮತ್ತು ಕೋಡ್’ ಬರಬೇಕು. ಆ ಮೂಲಕ ನಮ್ಮ ಹಕ್ಕನ್ನು ನಿರ್ಣಯಿಸುವ ಶಕ್ತಿ ನಮಗೆ ಬರಬೇಕಾಗಿದೆ ಎಂದರು. ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಕಕ್ಕಬ್ಬೆ, ಟಿ.ಶೆಟ್ಟಿಗೇರಿ ಮತ್ತು ಬಾಳೆಲೆಯಲ್ಲಿ ಜನ ಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗಿದ್ದು, ಮುಂದಿನ 6ನೇ ಮಾನವ ಸರಪಳಿ ಕಾರ್ಯಕ್ರಮವು ಜೂ.23 ರಂದು ಪೊನ್ನಂಪೇಟೆಯಲ್ಲಿ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಮಾಪಗಂಡ ಯಮುನ, ಕರ್ನಲ್ ಬಿ.ಎಂ.ಪಾರ್ವತಿ, ಕಾಂಡೇರ ಸುರೇಶ್, ಆದೇಂಗಡ ರಮೇಶ್, ಅಳ್ಮೆಂಗಡ ಬೋಸ್ ಮಂದಣ್ಣ, ಪಾರ್ವಂಗಡ ಬೋಸ್, ಕಾಡ್ಯಮಾಡ ಗಣಪತಿ, ಮಾಚಂಗಡ ಜಪ್ಪು, ಪುಳ್ಳಂಗಡ ಪೂಣಚ್ಚ, ಆದೇಂಗಡ ಬಬ್ಬು, ಅಳ್ಮೆಂಗಡ ಗೋಕುಲ, ಬಿದ್ದಮಾಡ ಪಾಪು, ಕೊಕ್ಕೆಂಗಡ ದಿಲೀಪ್, ಬಲ್ಯಮಿದೇರಿರ ಸಂತೋಷ್, ಮಚ್ಚಮಾಡ ದೊರೆ ಉತ್ತಯ್ಯ, ಮೇಚಂಡ ಅಪ್ಪಚ್ಚು, ಮಲ್ಚೀರ ದೇವಯ್ಯ, ಆದೇಂಗಡ ನಾಚಪ್ಪ, ಚೆಕ್ಕೇರ ಮಾದಪ್ಪ, ಪೊಡಮಾಡ ಸುಕೇಶ್, ಆದೇಂಗಡ ಅಜಯ್, ಕೊಕ್ಕಲೆಮಾಡ ನಾಣಯ್ಯ, ಮೇಚಂಡ ಶಾಂತ, ಪೊರಗಂಡ ವಿಠಲ್, ಚೆಕ್ಕೇರ ಬೋಪಣ್ಣ, ಪೊಡಮಾಡ ಮೋಹನ್, ಮುಕ್ಕಾಟೀರ ವಾಸು, ಆದೇಂಗಡ ಅರುಣ್, ಕಾಂಡೇರ ಅರುಣ್, ಕಾಂಡೇರ ಸೋಮಯ್ಯ, ಅಳ್ಮೆಂಗಡ ಮೋಹನ್, ಜಮ್ಮಡ ಮೋಹನ್, ಗಾಂಡಂಗಡ ಪೆಮ್ಮಯ್ಯ, ಅಳ್ಮೆಂಗಡ ಬಿದ್ದಪ್ಪ, ಮಾಚಂಗಡ ಸುಜ, ಮಲ್ಲಂಗಡ ರಾಜ, ಅಳ್ಮೆಂಗಡ ಹರೀಶ್, ಮಾಚಂಗಡ ಸತ್ಯ, ಚೆಕ್ಕೇರ ಅಯ್ಯಪ್ಪ, ಕೊಕ್ಕೆಂಗಡ ಪೊನ್ನಪ್ಪ, ಕೊಕ್ಕೆಂಗಡ ರೋಹಿತ್, ಕಾಂಡೇರ ಮಿಟ್ಟು ಕುಶಾಲಪ್ಪ, ಮಾಚಂಗಡ ಕುಶ, ಮಾಚಂಗಡ ಪ್ರವೀಣ್, ಆದೇಂಗಡ ನವೀನ್, ಪಾರ್ವಂಗಡ ನವೀನ್, ಕಾಟಿಮಾಡ ಉತ್ತಪ್ಪ, ಮದ್ರೀರ ಕರುಂಬಯ್ಯ ಮೊದಲಾದವರು ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎನ್‍ಸಿ ಬೇಡಿಕೆಗಳ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.










