

ಮಡಿಕೇರಿ ಜೂ.2 NEWS DESK : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ವಸತಿ ಶಾಲೆಗಳ ನೌಕರರ ಸಂಘದ ಕೊಡಗು ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಶಿಕ್ಷಕರು ಹಾಗೂ ನೌಕರರು ವಸತಿ ಶಾಲೆಯ ಖಾಯಂ ಶಿಕ್ಷಕರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಸರ್ಕಾರ ತಕ್ಷಣ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವಿ.ಅಲೋಕ್, ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧೀನದ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ರಾಜ್ಯಾದ್ಯಂತ 833 ವಸತಿ ಶಾಲೆ-ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಸುಮಾರು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣವನ್ನು ಉಚಿತವಾಗಿ ಪಡೆಯುತ್ತಿದ್ದಾರೆ. ಇವರಿಗೆ ಗುಣಾತ್ಮಕ ಮತ್ತು ಮೌಲ್ಯಯುತ ಶಿಕ್ಷಣವನ್ನು ಇಲ್ಲಿನ ಶಿಕ್ಷಕರು ನೀಡುತ್ತಾ ಬರುತ್ತಿದ್ದಾರೆ ಎಂದು ಗಮನ ಸೆಳೆದರು. ಶಿಕ್ಷಕರು ಕೆಪಿಎಸ್‍ಸಿ ಪರೀಕ್ಷೆಯ ಮೂಲಕ ಆಯ್ಕೆಯಾಗಿದ್ದರೂ ನವೋದಯ ವಿದ್ಯಾಲಯ ಮತ್ತು ಶಿಕ್ಷಣ ಇಲಾಖೆಯ ಶಾಲೆಗಳ ಸಿಬ್ಬಂದಿಗೆ ದೊರೆಯುತ್ತಿರುವ ಹಲವು ಸೌಲಭ್ಯಗಳು ವಸತಿ ಶಾಲೆಗಳ ಖಾಯಂ ನೌಕರರಿಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಮಾಡಬೇಕು ಅಥವಾ ವಸತಿ ಶಾಲೆಗಳನ್ನು ಸಿಬ್ಬಂದಿಯೊಂದಿಗೆ ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡಬೇಕು, ಖಾಯಂ ನೌಕರರಿಗೆ ಜ್ಯೋತಿ ಸಂಜೀವಿನಿ ಅನುಷ್ಠಾನಗೊಳಿಸಬೇಕು, ಮರಣ ಮತ್ತು ನಿವೃತ್ತಿ ಉಪಧನ ಸೌಲಭ್ಯ ಒದಗಿಸಬೇಕು, ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯಿತಿ ನೀಡಬೇಕು, ಖಾಯಂ ನೌಕರರಿಗೆ ಶೇ.10 ರಷ್ಟು ವಿಶೇಷ ಭತ್ಯೆ ಮಂಜೂರು ಮಾಡಬೇಕೆಂದು ವಿ.ಅಲೋಕ್ ಆಗ್ರಹಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಿದಂಬರ್, ಖಜಾಂಚಿ ಎಂ.ಆರ್.ಮೀನಾ, ಗೌರವಾಧ್ಯಕ್ಷ ಲೋಕೇಶ್ ಸೇರಿದಂತೆ ಶಿಕ್ಷಕರು ಹಾಗೂ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










