


ಚೆಟ್ಟಳ್ಳಿ ಜೂ.3 NEWS DESK : ಕೊಡಗಿನ ಪ್ರಸಿದ್ಧ ಬೇಡು ಹಬ್ಬಗಳಲ್ಲಿ ಒಂದಾಗಿರುವ ‘ಪಾರಣ ನಮ್ಮೆ’ ಕೊಡಗಿನ ಕೊನೆಯ ಬೋಡ್ ನಮ್ಮೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಬೇರಳ್ಳಿನಾಡಿನ ಪಾರಣಮಾನಿ ಎಂಬಲ್ಲಿ ಕೃತಕ ಕುದುರೆ, ಆನೆಯನ್ನು ಸಂಹರಿಸುವ ಮೂಲಕ ಐತಿಹಾಸಿಕ ಪಾರಣ ಬೇಡು ಹಬ್ಬಕ್ಕೆ ಅಂತಿಮ ತೆರೆ ಎಳೆಯಲಾಯಿತು. ಪ್ರತಿವರ್ಷದಂತೆ ಈ ಬಾರಿಯೂ ಸಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಯಿತು.
ಬೋಡ್ ನಮ್ಮೆಯ ಸಂದರ್ಭದಲ್ಲಿ ಬೇರಳಿನಾಡಿನ ಜನತೆ ದೇಶದ ಯಾವುದೇ ಭಾಗದಲ್ಲಿದ್ದರೂ ತಮ್ಮ ಊರಿಗೆ ಹಿಂತಿರುಗಿ ವಯಸ್ಸಿನ ಮಿತಿ ಇಲ್ಲದೆ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸುವುದೇ ಇಲ್ಲಿನ ವಿಶೇಷ. ಮೇ 26ರ ಮಧ್ಯಾಹ್ನ 3 ಗಂಟೆಗೆ ನಾಡ್ ತಕ್ಕಮುಖ್ಯಸ್ಥರು, ಊರಿನವರು ರುದ್ರಗುಪ್ಪೆಯ ಜೋಡು ಭಗವತಿ ದೇವಾಲಯದಲ್ಲಿ ಸೇರಿ ಅಂಬಲದಲ್ಲಿ ದೋಳ್ ತೆಗೆದು ಪಾರಂಪರಿಕ ಪಾರಣನಮ್ಮೆಯ ಹಾಡನ್ನು ಹಾಡುವ ಮೂಲಕ ಹಬ್ಬಕಟ್ಟು ಬೀಳಲಾಯಿತು. ಹಬ್ಬಕಟ್ಟು ಬಿದ್ದ ದಿನದಿಂದ 9 ಕೇರಿಗಳೊಳಗೊಂಡಿರುವ ಬೇರಳಿನಾಡಿನಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಕಂಡಂಗಾಲ, ಪೊದಕೇರಿ, ಮರೋಡಿ, ಬಾಡಗ ಗ್ರಾಮದ ಅಂಬಲದಲ್ಲಿ ಆಯಾಯ ಊರಿನವರು ಪಾರಂಪರಿಕ ದೋಳ್‌ಹಾಡನ್ನು ಹಾಡಿದರು. ಮೇ 30 ರಂದು ಸಂಜೆ ಅಂಬಲದಲ್ಲಿ ದೇವಾಲಯಕ್ಕೆ ತೆರಳಲು ಆಯ್ಕೆಮಾಡಿದ ವ್ಯಕ್ತಿಗಳು ದೇವರ ಭಂಡಾರ, ಫಲತಾಬೂಂಲವನ್ನು ತಂದು ದೇವತಾಕಾರ್ಯವನ್ನು ಕೈಗೊಂಡರು. ಮೇ 31ರ ಕಮಟ್ಟಪ್ಪ ಈಶ್ವರ ನೆಲೆಯಲ್ಲಿ ಪೂಜೆಸಲ್ಲಿಸಿ ಅರ್ಚಕರು, ಪಾರಾಣ ಉತ್ಸವದ ಹಾಡನ್ನು ಹಾಡಿ ಹಬ್ಬವನ್ನು ನಾಡಿಗೆ ತಂದರು. ಅಂದು ಸಂಜೆ ಉತ್ಸವದ ಕಟ್ಟುಪಾಡಿನಂತೆ ಚಿಕ್ಕಮ್ಮಜೋಗಿ, ಬೈರಮ್ಮ ಜೋಗಿ, ಹೊಟ್ಟೆಯಮಾರಾ, ಕೊಡಂಗಿದಾಸ, ವಡ್ಡ, ಚೂಳೆ, ಪಾಲೆಕರಂಬವೆಂಬ ದೇವರ 7 ವೇಶಧಾರಿಗಳು ತಕ್ಕರ ಮನೆಯಿಂದ ಹೊರಟು ನಾಡಿನ ಐನ್‌ಮನೆಗೂ, ಊರಿನ ಮನೆಮನೆಗೂ ತಂಡೋಪತಂಡವಾಗಿ ತೆರಳಿ ಪಾರಂಪರಿಕ ಹಾಡಿಗೆ ಹೆಜ್ಜೆಹಾಕಿದರು. ಮುಂಜಾನೆ ಬಾಡಗ ಅಂಬಲದ ಪಕ್ಕದಲ್ಲಿರುವ ಕುದುರೆಪುಂಡ ಕಡಿಯುವ ಶಾಸ್ತ್ರ ನಡೆಯಿತು. ನಂತರ ಆಯಾಯ ಊರಿನವರು ತಲಾ 1 ರಂತೆ 5ಬಿದಿರನ್ನು ಮಾತ್ರ ಕಡಿದು ತಂದು ಕೃತಕ ಆನೆ ಹಾಗೂ ಕುದುರೆಯನ್ನು ತಯಾರಿಸಿದರು. ಬಾಡಗ, ಕಂಡಂಗಾಲದಿಂದ ಶೃಂಗರಿಸಿದ 3 ಬಿದಿರ ಕುದುರೆ, ಆನೆಯನ್ನು ಹೊತ್ತ ವಿಶೇಷ ವೇಷದಾರಿಗಳು ತಕ್ಕರ ಮನೆಯಲ್ಲಿ ಹಾಗೂ ಮರೋಡಿ ಅಂಬಲದಲ್ಲಿ ಒಟ್ಟುಸೇರಿ ದೇವರನ್ನು ಪ್ರಾರ್ಥಿಸುತ್ತಾ ಪ್ರದಕ್ಷಿಣೆ ಹಾಕಿದರು. ಕುದುರೆ ಆನೆಗಳ ಶಕ್ತಿ ಪ್ರದರ್ಶಿಸುವ ಮೂಲಕ ವೇಶದಾರಿಗಳು, ಗ್ರಾಮಸ್ಥರು ಕುಣಿದು ಕುಪ್ಪಳಿಸಿದರು. ನಂತರ ಪಾರಣಮಾನಿ (ಗದ್ದೆ)ಯಲ್ಲಿ ಆನೆ, ಕುದುರೆಯ ಪ್ರತಿಕೃತಿಯನ್ನು ಸಂಹರಿಸುವ ಮೂಲಕ ಉತ್ಸವಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.
ವರದಿ : ಪುತ್ತರಿರ ಕರುಣ್ ಕಾಳಯ್ಯ










