
ವಿರಾಜಪೇಟೆ ಜೂ.4 NEWS DESK : ತಿತಿಮತಿ ಸರ್ಕಾರಿ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿತ್ತಿದ್ದ ಚಾರ್ಲ್ಸ್ ಡಿಸೋಜಾ ಸೇವೆಯಿಂದ ನಿವೃತರಾಗಿದ್ದಾರೆ. 1987 ರಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಚಾರ್ಲ್ಸ್ ಡಿಸೋಜಾ 2005 ರ ವರೆಗೂ ವಿವಿಧ ಶಾಲೆಗಳಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ, ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಾಲಾ ತನಿಖಾಧಿಕಾರಿಗಳಾಗಿ, ನಂತರ ವಿರಾಜಪೇಟೆ ತಾಲ್ಲೂಕು ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಬಡ್ತಿಯ ಮೂಲಕ ವಿರಾಜಪೇಟೆ ಸ.ಪ.ಪೂ. ಕಾಲೇಜಿಗೆ ಆಂಗ್ಲ ಭಾಷಾ ಉಪನ್ಯಾಸಕರಾಗಿ 2005 ರಲ್ಲಿ ಪಾದಾರ್ಪಣೆ ಮಾಡಿದ ಅವರು 13 ವರ್ಷಗಳ ಕಾಲ ಅಲ್ಲಿಯೇ ಸೇವೆ ಸಲ್ಲಿಸಿದ್ದಾರೆ. ಆ ಸಂದರ್ಭದಲ್ಲಿ ಕಾಲೇಜಿನ ಎನ್.ಎಸ್.ಎಸ್ ಘಟಕದ ಅಧಿಕಾರಿಗಳಾಗಿಯೂ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಂತರ ಸುಳ್ಯದ ಐವರ್ನಾಡು ಪಿಯು ಕಾಲೇಜು, ತಿತಿಮತಿಯ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರಾಗಿ, ಪ್ರಭಾರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದರು. 38 ವರ್ಷಗಳ ವೃತ್ತಿ ಸೇವಾ ಅನುಭವವನ್ನು ಹೊಂದಿದ್ದ ಅವರು ಮಡಿಕೇರಿಯ ಆಕಾಶವಾಣಿಯಲ್ಲಿ 60ಕ್ಕೂ ಅಧಿಕ ಚಿಂತನಗಳ ಪ್ರಸಾರವನ್ನು ನೀಡಿದ್ದಾರೆ. ವಿರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಪೋಷಕ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ, ಸಂತ ಅನ್ನಮ್ಮ ಚರ್ಚ್ ನ ಸಲಹಾ ಸಮಿತಿಯ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವಿರಾಜಪೇಟೆ ಶಾಖೆಯ ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸಿದರು. ಜೊತೆಗೆ ಕವಿಗೋಷ್ಠಿ, ಕಾರ್ಯಕ್ರಮದ ನಿರೂಪಣೆ, ಬರಹಗಾರರಾಗಿಯು ತಮ್ಮನ್ನು ತಾವು ತೊಡಗಿಸಿಕೊಂಡು ಜನ ಮೆಚ್ಚಿದ ಶಿಕ್ಷಕರಾಗಿ ಜನಾನುರಾಗಿದ್ದಾರೆ.











