
ಮಡಿಕೇರಿ ಜೂ.7 NEWS DESK : ಮಡಿಕೇರಿಯ ಸಿ.ಪಿ.ಸಿ ಲೇಔಟ್ನ ಮಸ್ಜಿದ್ ಉರ್ ರ್ರಹ್ಮಾ ಮಸೀದಿಯಲ್ಲಿ ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮುಂಜಾನೆ ಮಸೀದಿಯಲ್ಲಿ ಮುಸಲ್ಮಾನ ಬಾಂಧವರು ಜಮಾಜ್ ಸಲ್ಲಿಸಿ, ಮಸ್ಜಿದ್ ಉರ್ ರ್ರಹ್ಮಾ ಮಸೀದಿಯ ಧರ್ಮಗುರು ಉಮ್ಮರ್ ಮೌಲವಿ, ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಧರ್ಮಗುರು ಉಮ್ಮರ್ ಮೌಲವಿ, ತ್ಯಾಗ ಬಲಿದಾನ, ಮತ್ತು ಸಹನೆಯ ಪ್ರತೀಕರಾಗಿದ್ದ ಪ್ರವಾದಿ ಇಬ್ರಾಹಿಮರ ಚರಿತ್ರೆ ಮಾನವ ಕುಲಕ್ಕೆ ಮಾದರಿ. ಏಕ ದೇವತ್ವದ ಪ್ರತಿಪಾದಕರಾಗಿದ್ದ ಪ್ರವಾದಿ ಇಬ್ರಾಹಿಮರು ತಮ್ಮ ಜೀವನದುದ್ದಕ್ಕೂ ದೇವನ ಸಂಪ್ರೀತಿಗಾಗಿ ಬದುಕಿದ ಸಂತರು ಎಂದರು. ವಿಶ್ವಾಸಿಗಳು ಎಂದಿಗೂ ಕೋಮುವಾದಿಗಳಾಗಲು ಸಾಧ್ಯವಿಲ್ಲ. ಮಾನವೀಯ ಮೌಲ್ಯಗಳನ್ನು ಕಾಯ್ದುಕೊಳ್ಳುವವರಾಗಿದ್ದಾರೆ. ಪ್ರೀತಿ, ಕಾರುಣೆ, ಚಿಂತನೆ, ಸೇವಾ ಗುಣಗಳನ್ನು ತೋರುವವರಾಗಿದ್ದಾರೆ ಎಂದರು. ಇಂದು ಸಮಾಜದಲ್ಲಿ ಮಾದಕ ದ್ರವ್ಯಗಳ ವ್ಯಸನದ ದಾಸರಾಗಿರುವ ಯುವಕರನ್ನು ಇದರಿಂದ ವಿಮುಕ್ತಗೊಳಿಸಲು ನಾವು ಪ್ರಯತ್ನ ಮಾಡಬೇಕು, ಭಯೋತ್ಪಾದನೆ ಇಲ್ಲದಂತೆ ಮಾಡಬೇಕು, ಕೋಮುವಾದವನ್ನು ಬಿಟ್ಟು ಪರಸ್ಪರ ಎಲ್ಲರೂ ಪ್ರೀತಿ ವಿಶ್ವಾಸದಿಂದ ಇರಬೇಕು ಎಂದು ಕರೆ ನೀಡಿದರು. ನಂತರ ವಿಶೇಷ ಸಿಹಿ ಖಾದ್ಯಗಳನ್ನು ನೀಡಿ ಪರಸ್ಪರ ಶುಭ ಹಾರೈಸಿದರು.










