
ಸೋಮವಾರಪೇಟೆ ಜೂ.7 NEWS DESK : ಎಸ್‍ಎಸ್‍ಎಲ್‍ಸಿಯಲ್ಲಿ ಅತೀ ಹೆಚ್ಚು ಅಂಕಗಳೊಂದಿಗೆ ಕೊಡಗು ಜಿಲ್ಲೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ತಾಲ್ಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಮೂವರು ವಿದ್ಯಾರ್ಥಿನಿಯರನ್ನು ರೋಟರಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಬೆಂಕಳ್ಳಿ-ಕೊತ್ನಳ್ಳಿ ಗ್ರಾಮದ ಸಿ.ಟಿ.ಸತೀಶ್ ಪ್ರಗತಿ ದಂಪತಿ ಪುತ್ರಿ ಸಿ.ಎಸ್.ಆದ್ವಿ 625ಕ್ಕೆ 623 ಅಂಕ ಪಡೆದು ಜಿಲ್ಲೆಗೆ ಟಾಫರ್‍ನೊಂದಿಗೆ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಹೆತ್ತೂರು ಕೊಣಬನಹಳ್ಳಿಯ ಚಂದ್ರಕುಮಾರ್ ಶಿಲ್ಪ ದಂಪತಿ ಪುತ್ರಿ ಕೆ.ವಿ.ಪಂಚಮಿ 621 ಅಂಕಗಳೊಂದಿಗೆ ಜಿಲ್ಲೆಗೆ ದ್ವಿತೀಯ ಹಾಗು ರಾಜ್ಯಕ್ಕೆ ಮಟ್ಟದಲ್ಲಿ 5 ನೇ ಸ್ಥಾನ ಪಡೆದುಕೊಂಡಿದ್ದಾರೆ. ಚಿಕ್ಕತೋಳೂರು ಗ್ರಾಮದ ಸಿ.ಜೆ.ಸೋಮಶೇಖರ್ ಶೈಲಾ ದಂಪತಿ ಪುತ್ರಿ ಸಿ.ಎಸ್.ತೇಜಸ್ವಿನಿ 619 ಅಂಕಗಳೊಂದಿಗೆ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಮೂವರು ಸಾಧಕ ವಿದ್ಯಾರ್ಥಿನಿಯರಿಗೆ ರೋಟರಿ ಅಧ್ಯಕ್ಷ ಜೆ.ಕೆ.ಪೊನ್ನಪ್ಪ ಸಾಲು ಹೊದಿಸಿ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತ ಕುಟುಂಬದ ಮಕ್ಕಳು ಇಂತಹ ಸಾಧನೆ ಮಾಡಿರುವುದು ನಮ್ಮೆಲ್ಲರಿಗೂ ಹೆಮ್ಮೆ ಎನಿಸಿದೆ. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಾಲೆ ತೆರಯುತ್ತಿದ್ದೇವೆ ಎಂದು ಒಕ್ಕಲಿಗರ ಸಂಘ ಪದಾಧಿಕಾರಿಗಳು ಹಿಂದೆ ಹೇಳಿದ ಸಂದರ್ಭ ಅನೇಕರು ಅಪಹಾಸ್ಯ ಮಾಡಿದ್ದರು. ಈಗ ರಾಜ್ಯ ಮಟ್ಟದಲ್ಲಿ 3ನೇ ಸ್ಥಾನ ಗಳಿಸಿ ಉತ್ತಮ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘೀಸಿದರು. ಹೊರ ಜಿಲ್ಲೆ ಹಾಗೂ ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಓದಿಸಿದರೆ ಮಾತ್ರ ಉತ್ತಮ ಅಂಕಗಳಿಸಿಲು ಸಾಧ್ಯ ಎಂಬ ಪೋಷಕರಿಗೆ ಇರುವ ಭ್ರಮೆಯನ್ನು ಈ ಮೂವರು ಗ್ರಾಮೀಣ ವಿದ್ಯಾರ್ಥಿಗಳು ಸುಳ್ಳು ಮಾಡಿದ್ದಾರೆ. ತಾಯಿ, ತಂದೆ, ಅಜ್ಜ, ಅಜ್ಜಿ, ಅಣ್ಣ, ತಂಗಿಯರ ಜೊತೆಯಲ್ಲಿದ್ದುಕೊಂಡು ಓದಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕುಟುಂಬದ ಪರಿಸರದಲ್ಲಿದ್ದುಕೊಂಡು ಓದಿದ ಅದೆಷ್ಟೋ ಮಂದಿ ಇವತ್ತಿಗೂ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಅಭಿಪ್ರಾಯಿಸಿದರು. ಕಲಿಕೆಯ ಬಗ್ಗೆ ಆಸಕ್ತಿಯಿರುವ ಮಕ್ಕಳು, ಮನೆಯ ಪಕ್ಕದ ಶಾಲಾ, ಕಾಲೇಜಿನಲ್ಲಿ ಕಲಿತು ಉತ್ತಮ ಅಂಕದೊಂದಿಗೆ ಉನ್ನತ ಸಾಧನೆ ಮಾಡಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಲಯ ಸೇನಾನಿ ಎಂ.ಎಂ.ಪ್ರಕಾಶ್, ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ಮುಂದಿನ ಸಾಲಿನ ಕಾರ್ಯದರ್ಶಿ ಡಿ.ಪಿ.ರಮೇಶ್ ಇದ್ದರು.










