
ನಾಪೋಕ್ಲು ಜೂ.7 NEWS DESK : ಕಿಡ್ನಿ ವೈಫಲ್ಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬೆಟ್ಟದ ಕಾಡುವಿನ ಯುವಕ ಕಿರಣ್ ಚಿಕಿತ್ಸೆಗಾಗಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದಿಂದ ಆರ್ಥಿಕ ನೆರವು ನೀಡಲಾಯಿತು. ಸಿದ್ದಾಪುರದ ನೆಲ್ಲಿಹುದಿಕೇರಿಯ ಬೆಟ್ಟದಕಾಡುವಿನ ತನಿಯಪ್ಪ ಮತ್ತು ಮೀನ ದಂಪತಿಗಳ ಪುತ್ರ ಕಿರಣ್ ಎರಡು ಕಿಡ್ನಿ ವೈಫಲ್ಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಇವರ ಚಿಕಿತ್ಸೆಗಾಗಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ನೇತೃತ್ವದಲ್ಲಿ ದಾನಿಗಳಿಂದ ಸಂಗ್ರಹಿಸಲಾದ ಮೊತ್ತವನ್ನು ಕಿರಣ್ ಪೋಷಕರಿಗೆ ಹಸ್ತಾಂತರಿಸಲಾಯಿತು. ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಜಿಲ್ಲಾಧ್ಯಕ್ಷ ಕೆ.ಕುಶಾಲಪ್ಪ ಮಾತನಾಡಿ, ಬಡತನ ತುಂಬಿದ ಕುಟುಂಬಕ್ಕೆ ನಾಡಿನ ದಾನಿಗಳಿಂದ ಸಂಗ್ರಹಗೊಂಡ ರೂ.52 ಸಾವಿರ ಧನ ಸಹಾಯವನ್ನು ನೀಡಲಾಗಿದೆ. ಮುಂದಿನ ಚಿಕಿತ್ಸೆಗಾಗಿ ಸುಮಾರು 15 ಲಕ್ಷ ದಷ್ಟು ಅಗತ್ಯ ಇದ್ದು, ನಾಡಿನ ಸಮಸ್ತ ಬಾಂಧವರು ಈ ಕುಟುಂಬಕ್ಕೆ ಸಹಾಯ ಹಸ್ತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ, ಪದಾಧಿಕಾರಿಗಳಾದ ಮಂಜು ಬೈಚನಹಳ್ಳಿ, ಯೋಗೀಶ್ ನೆಲ್ಲಿಹುದಿಕೇರಿ, ರೋಹಿತ್ ಹುದಿಕೇರಿ ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.









