
ಕುಶಾಲನಗರ ಜೂ.7 NEWS DESK : ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯ, ನೈರ್ಮಲ್ಯ , ವೈಯಕ್ತಿಕ ಸ್ವಚ್ಛತೆ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಸೊಳ್ಳೆಗಳ ಕಡಿತದಿಂದ ಬರುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ ಬಿ.ಎಲ್. ಶ್ರೀನಿವಾಸ್ ಕರೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಕುಶಾಲನಗರ ತಾಲ್ಲೂಕು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮುಖ್ಯ ಶಿಕ್ಷಕರು, ಆರೋಗ್ಯ ಕಾರ್ಯಕ್ರಮದ ನೋಡಲ್ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸೊಳ್ಳೆಗಳಿಂದ ಹರಡುವ
ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ನೀಡಿ ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಸಮುದಾಯದ ಸಹಕಾರ ಅಗತ್ಯ ಎಂದರು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆ( ಎನ್ನೆಸ್ಸೆಸ್ ) ವತಿಯಿಂದ “ಈಡಿಸ್ ಲಾರ್ವ ಮುಕ್ತ ಶಾಲಾ ಆವರಣ ” ಕಾರ್ಯಕ್ರಮದಡಿ ಏರ್ಪಡಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದ ಡಾ ಶ್ರೀನಿವಾಸ್, ಶಾಲಾ ಮಕ್ಕಳ ಆರೋಗ್ಯ ಬಹಳ ಮುಖ್ಯವಾದುದು. ಈ ದಿಸೆಯಲ್ಲಿ ಶಾಲಾವರಣ, ಶಾಲೆಯ ಶೌಚಾಲಯ ಹಾಗೂ ನೀರಿನ ಟ್ಯಾಂಕ್ ಗಳಲ್ಲಿ ಮತ್ತು ಶಾಲಾ ಅಡುಗೆ ಕೋಣೆ ಸೇರಿದಂತೆ ಎಲ್ಲೆಡೆ ಹೇಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಹಾಗೂ ಶಾಲಾ ಮಕ್ಕಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಡಾ ಶ್ರೀನಿವಾಸ್ ಮಾಹಿತಿ ನೀಡಿದರು. ಸೊಳ್ಳೆಗಳ ಕಡಿತದಿಂದ ಬರುವ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ತಮ್ಮ ಮನೆಯ ನೀರಿನ ತೊಟ್ಟಿ, ಡ್ರಮ್, ಚರಂಡಿಗಳಲ್ಲಿ ಹೆಚ್ಚು ದಿನಗಳ ಕಾಲ ನೀರು ಸಂಗ್ರಹಣೆ ಮಾಡುವುದರಿಂದ ಸೊಳ್ಳೆ ಲಾರ್ವ ಉತ್ಪತ್ತಿಗೊಂಡು ಸಂತಾನಾಭಿವದ್ಧಿ ಹೊಂದುತ್ತವೆ. ಇದನ್ನು ನಿಯಂತ್ರಿಸಲು ನೀರಿನ ತೊಟ್ಟಿಗಳನ್ನು ಆಗಿಂದಾಗ್ಗೆ ಸ್ವಚ್ಚಗೊಳಿಸಬೇಕೆಂದರು. ಮಲೇರಿಯಾ, ಡೆಂಗೆ, ಚಿಕೂನ್‌ಗುನ್ಯಾ ರೋಗಗಳು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾಗಿದ್ದು, ಸಾರ್ವಜನಿಕರು ಜಾಗೃತಗೊಂಡಲ್ಲಿ ತಡೆಗಟ್ಟಬಹುದು ಎಂದರು.
ಜಿಲ್ಲಾ ಸಾಂಕ್ರಾಮಿಕ ರೋಗ ಶಾಸ್ತ್ರಙ್ಞ ಅಧಿಕಾರಿ ಕಿಶೋರ್ ಮಾತನಾಡಿ, ಪ್ರತಿಯೊಬ್ಬರು ತಮ್ಮ ಮನೆ ಮತ್ತು ಸುತ್ತಮುತ್ತಲ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವುದು ಅವಶ್ಯಕವಾಗಿದೆ. ಡೆಂಗ್ಯೂ ಚಿಕನ್‌ಗುನ್ಯ, ಮಲೇರಿಯಾ ಇನ್ನಿತರ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಎಲ್ಲರೂ ಸೂಕ್ತ ನಿಯಮ ಪಾಲಿಸಿದರೆ ರೋಗ ತಡೆಗಟ್ಟಲು ಸಾಧ್ಯ ಎಂದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆರೋಗ್ಯ, ನೈರ್ಮಲ್ಯ ಹಾಗೂ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು. ಮುಖ್ಯ ಶಿಕ್ಷಕಿ ಎಚ್.ಎಸ್.ಸುಜಾತ, ಪ್ರೌಢಶಾಲಾ ನೋಡಲ್ ಅಧಿಕಾರಿ ಬಿ.ಡಿ.ರಮ್ಯ, ಶಿಕ್ಷಕರಾದ ದಯಾನಂದ ಪ್ರಕಾಶ್, ಬಿ.ಎನ್.ಸುಜಾತ, ಎಸ್.ಎಂ.ಗೀತಾ, ಅನ್ಸಿಲಾ ರೇಖಾ ಇತರರು ಇದ್ದರು.









