
ಮಡಿಕೇರಿ ಜೂ.10 NEWS DESK : ವಿಧಾನ ಪರಿಷತ್ ಸದಸ್ಯರೊಬ್ಬರು ಸಮಾಜಪರ ಚಿಂತನೆವುಳ್ಳ ಸ್ವಾಭಿಮಾನಿ, ಅಂಬೇಡ್ಕರ್‍ವಾದಿ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಾಜಶೇಖರ್, ಬಿಜೆಪಿ ತನ್ನ ಕೋಮುವಾದದ ಅಜೆಂಡಾದಿಂದ ಸೋಲು ಕಂಡಿದೆ. ರಾಜಕೀಯದಲ್ಲಿ ಪರ, ವಿರೋಧ ಸಹಜ, ಆದರೆ ಅದು ಪ್ರಗತಿಪರವಾಗಿರಬೇಕು ಮತ್ತು ಜನಪರವಾಗಿರಬೇಕು. ಅನವಶ್ಯಕ ಆಕ್ಷೇಪಾರ್ಹ ಪದ ಬಳಕೆ ಶೋಭೆ ತರುವುದಿಲ್ಲ ಎಂದು ಹೇಳಿದರು. ಪ್ರಿಯಾಂಕ್ ಖರ್ಗೆ ಅವರ ಹೆಸರಿಗೆ, ವಕ್ತಿತ್ವಕ್ಕೆ ಹಾಗೂ ಕುಟುಂಬಕ್ಕೆ ಧಕ್ಕೆ ತಂದಿರುವ ಕರ್ನಾಟಕ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ನಡೆ ಖಂಡನೀಯ ಎಂದರು. ನಾರಾಯಣಸ್ವಾಮಿ ಅವರು ಸಂವಿಧಾನ ಬದ್ಧ ಹುದ್ದೆಗೆ ಚ್ಯುತಿ ತರುವ ರೀತಿಯಲ್ಲಿ ನಡೆದುಕೊಂಡು ಆ ಹುದ್ದೆಯ ಘನತೆಗೆ ಧಕ್ಕೆ ತಂದಿದ್ದಾರೆ. ಆದ್ದರಿಂದ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ಹಾಗೂ ವಿರೋಧ ಪಕ್ಷದ ನಾಯಕ ಸ್ಥಾನದಿಂದ ತಕ್ಷಣ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಅಲ್ಲದೇ ಕಲಬುರ್ಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ನಡೆದ ಪ್ರತಿಭಟನೆ ರ್ಯಾಲಿ ಸಂದರ್ಭ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಅಸಂವಿಧಾನಿಕ ಪದ ಬಳಕೆ ಮಾಡಿದ ಎನ್.ರವಿಕುಮಾರ್ ಹೇಳಿಕೆ ಖಂಡನೀಯ. ತಕ್ಷಣ ಅವರನ್ನು ವಿಧಾನ ಪರಿಷತ್ ಸ್ಥಾನದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಯಾವುದೇ ಕ್ರಮಕೈಗೊಳ್ಳದೆ ಇದ್ದಲ್ಲಿ ಸಾವಿರಾರು ಮಂದಿಯನ್ನು ಸೇರಿಸಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಎನ್.ರಾಜಪ್ಪ ಮಾತನಾಡಿ, ಕೆಲವು ಬಿಜೆಪಿಗರು ಅಂಬೇಡ್ಕರ್ ವಾದಿ ಪ್ರಿಯಾಂಕ್ ಖರ್ಗೆ ಹಾಗೂ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದು, ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಎನ್.ಆರ್.ದೇವರಾಜು, ಎಸ್.ಜೆ.ರಾಜಪ್ಪ, ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಹೆಚ್.ಸಿ.ಚಂದ್ರಶೇಖರ್ ಹಾಗೂ ಸಂಘಟನಾ ಸಂಚಾಲಕ ಬಿ.ಕೆ.ದಯಾಕರ ಉಪಸ್ಥಿತರಿದ್ದರು.









