
ಕುಶಾಲನಗರ NEWS DESK ಜೂ.14 : ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಈ ಬಾರಿ ಶೇ.100ರಷ್ಟು ಫಲಿತಾಂಶ ಬಂದಿದೆ. ಉತ್ತೀರ್ಣ ಆದವರ ಪೈಕಿ 100 ವಿದ್ಯಾರ್ಥಿಗಳು ವಿವಿಧ ಜಾಗತಿಕ ಕಂಪನಿಗಳಿಗೆ ನೇಮಕ ಮತ್ತು ತರಬೇತಿ ಕಾರ್ಯಗಾರ ಗಳಿಗೆ ಆಯ್ಕೆಯಾಗಿದ್ದಾರೆ. ಇನ್ನು ಕೆಲವರು ಹೆಚ್ಚಿನ ವ್ಯಾಸಂಗಕ್ಕೆ ಇಚ್ಚಿಸಿದ್ದು ಕೆಸಿಇಟಿ ಪರೀಕ್ಷೆಗಳನ್ನು ಬರೆದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಪರಶಿವಮೂರ್ತಿ ತಿಳಿಸಿದ್ದಾರೆ. ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಲೇಜಿನಲ್ಲಿ ನಾಲ್ಕು ವಿಭಾಗದಲ್ಲಿ ಕೂಡ ಶೇ. 100 ಫಲಿತಾಂಶ ಬಂದಿದ್ದು ಹರ್ಷದಾಯಕ ವಿಷಯವಾಗಿದೆ. ವಿಭಾಗದ ಮುಖ್ಯಸ್ಥರು, ಬೋಧಕ, ಬೋಧಕೇತರ ವರ್ಗ ಹಾಗೂ ಕಾಲೇಜು ಸಿಬ್ಬಂದಿ ಶ್ರಮವೇ ಇದಕ್ಕೆ ಕಾರಣ ಎಂದರು. ಈ ಸಂದರ್ಭ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಎಸ್. ಸತೀಶ್ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವಿದ್ಯಾರ್ಥಿಗಳ ಸಾಧನೆಗಳನ್ನು ಗೌರವಿಸುವ ಭಾಷಣಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಪ್ರಶಸ್ತಿ ವಿತರಣೆ ಈ ಸಂದರ್ಭ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಕಳೆದ ವಿದ್ಯಾರ್ಥಿಗಳು ನಾಲ್ಕು ವರ್ಷದ ಕಾಲೇಜಿನ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡರು.








