
ಮಡಿಕೇರಿ ಜೂ.14 NEWS DESK : ಸೋಮವಾರಪೇಟೆ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕಾಮತ್, ಅವರು ಮಲೇರಿಯಾ ಸೋಂಕಿನ ಕುರಿತು ಎಚ್ಚರ ವಹಿಸುವುದು ಅಗತ್ಯವೆಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ಸೋಮವಾರಪೇಟೆ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಸುಂಟಿಕೊಪ್ಪ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ನಡೆದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದು ಜಾಗತಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಗಿದೆ. ಒಂದು ಬಾರಿ ಈ ಸೋಂಕಿತ ಅನಾಫಿಲಿಸ್ ಹೆಣ್ಣು ಸೊಳ್ಳೆಯು ಮನುಷ್ಯನಿಗೆ ಕಚ್ಚಿದ ಬಳಿಕ ಪ್ಲಾಸ್ಮೋಡಿಯವು ಮನುಷ್ಯನ ಯಕೃತ್ ನಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡಿ ಸೋಂಕು ಉಂಟು ಮಾಡಿ ಕೆಂಪು ರಕ್ತ ಕಣಗಳನ್ನು ನಾಶಪಡಿಸುತ್ತದೆ ಎಂದು ತಿಳಿಸಿದರು. ತಾಲೂಕು ಆರೋಗ್ಯ ಅಧಿಕಾರಿ ಡಾ.ಇಂದುದರ್ ಸೋಂಕಿತ ಅನಾಫಿಲಿಸ್ ಹೆಣ್ಣು ಸೊಳ್ಳೆ ಮತ್ತು ಅದರ ಜೀವನ ಚಕ್ರವನ್ನು ವಿವರಿಸಿದರು. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ, ಮೈಕೈ ನೋವು ಸಾಮಾನ್ಯ ಸಮಸ್ಯೆಗಳಾಗಿವೆ. ಇವುಗಳ ಬಗ್ಗೆ ಅರಿತು ಚಿಕಿತ್ಸೆ ಪಡೆದರೆ ಮಾರಕ ಪರಿಣಾಮಗಳನ್ನು ತಪ್ಪಿಸಬಹುದು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಮಾತನಾಡಿ, ಪ್ರತಿ ಮನೆಯ ಸದಸ್ಯರು ಸ್ವತಃ ಮನೆಯ ಹೊರಾಂಗಣ ಮತ್ತು ಒಳಾಂಗಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಲಾರ್ವ ಸಮೀಕ್ಷೆಯನ್ನು ಮಾಡಿಕೊಳ್ಳುವುದು ಮತ್ತು ಸೊಳ್ಳೆ ಪರದೆಯನ್ನು ಬಳಸುವುದರೊಂದಿಗೆ ಸೋಂಕಿತ ಅನಾಫಿಲಿಸ್ ಹೆಣ್ಣು ಸೊಳ್ಳೆಯ ನಿಯಂತ್ರಣವನ್ನು ಮಾಡಬಹುದು ಮತ್ತು ಆರೋಗ್ಯ ಇಲಾಖೆಯವರು ಮನೆಮನೆಗೆ ಲಾರ್ವ ಸಮೀಕ್ಷೆಗೆ ತೆರಳಿ ಸಮಯದಲ್ಲಿ ಸಹಕರಿಸುವಂತಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಮೀರಜ್ ಮತ್ತು ತಂಡ, ಡಾ.ಮಹೇಶ್, ಡಾ.ಸರವಣ, ಡಾ.ರಾಜಶ್ರೀ, ಡಾ.ಶ್ರೀದೇವಿ, ಡಾ.ಕೃತಿಕಾ ಮತ್ತು ತಂಡದವರು, ಬಿಪಿಎಂ ಮಹೇಶ್ ಪಾಲ್ಗೊಂಡಿದ್ದರು.









