ಮಡಿಕೇರಿ NEWS DESK ಜೂ.18 : ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ಇಂದು ಇಳಿಮುಖಗೊಂಡಿತು. ಮಡಿಕೇರಿ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದ್ದು, ಉಳಿದೆಡೆ ಕಡಿಮೆ ಪ್ರಮಾಣದ ಮಳೆ ಸುರಿದಿದೆ. ತಲಕಾವೇರಿ ಹಾಗೂ ಭಾಗಮಂಡಲ ಭಾಗದಲ್ಲಿ ಮಳೆಯ ವೇಗ ಕಡಿಮೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 4 ಇಂಚು ಮಳೆಯಾಗಿದೆ. ಮಡಿಕೇರಿಯಲ್ಲಿ ಚಳಿಗಾಳಿ ಮುಂದುವರಿದಿದ್ದು, ಮಂಜು ಮುಸುಕಿದ ವಾತಾವರಣವಿದೆ.
*ಡಿಸಿಎಂ ಗೆ ಹಾರಂಗಿ ಮಾಹಿತಿ*
ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಡಿಯೋ ಕರೆ ಮೂಲಕ ಹಾರಂಗಿ ಸ್ಥಿತಿಗತಿಯನ್ನು ವಿವರಿಸಿದರು. ಸೇತುವೆ ನಿರ್ಮಾಣದ ಬಗ್ಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲು ಮನವಿ ಮಾಡಿದರು.
ಹಾರಂಗಿ ಜಲಾಶಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಿ ಜಲಾಶಯದಲ್ಲಿ ಒಳ ಹರಿವಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ಹೆಚ್ಚಿನ ನೀರನ್ನು ನದಿಗೆ ಹರಿಯ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಿರು ಸೇತುವೆ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತವಾಗುವ ಹಿನ್ನೆಲೆಯಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲು ಉಪಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವÀ ಡಿ.ಕೆ.ಶಿವಕುಮಾರ್ ಅವರಲ್ಲಿ ಕೋರಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೂ ವಿಡಿಯೋ ಕಾಲ್ ಮಾಡುವ ಮೂಲಕ ಹಾರಂಗಿ ಸ್ಥಿತಿಗತಿಯ ಮಾಹಿತಿ ನೀಡಿದರು.
*ಮಳೆ ವಿವರ* ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 39.92 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 8.07 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1029.43 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 504.49 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 54.25 ಮಿ.ಮೀ. ಕಳೆದ ವರ್ಷ ಇದೇ ದಿನ 15.30 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1559.77 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 703.94 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 48.25 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 10.50 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1073.40 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 448.25 ಮಿ.ಮೀ. ಮಳೆಯಾಗಿತ್ತು. ಪೊನ್ನಂಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 36.45 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.25 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 938.55 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 465.39 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 43.55 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 3.60 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 930.07 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 417.18 ಮಿ.ಮೀ. ಮಳೆಯಾಗಿತ್ತು. ಕುಶಾಲನಗರ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 17.10 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 10.70 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 645.34 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 487.70 ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 32, ನಾಪೋಕ್ಲು 50.80, ಸಂಪಾಜೆ 43, ಭಾಗಮಂಡಲ 91.20, ವಿರಾಜಪೇಟೆ 49, ಅಮ್ಮತ್ತಿ 47.50, ಹುದಿಕೇರಿ 36.80, ಶ್ರೀಮಂಗಲ 31, ಪೊನ್ನಂಪೇಟೆ 33, ಬಾಳೆಲೆ 45, ಸೋಮವಾರಪೇಟೆ 30.20, ಶನಿವಾರಸಂತೆ 28, ಶಾಂತಳ್ಳಿ 80, ಕೊಡ್ಲಿಪೇಟೆ 36, ಕುಶಾಲನಗರ 7, ಸುಂಟಿಕೊಪ್ಪ 27.20 ಮಿ.ಮೀ.ಮಳೆಯಾಗಿದೆ.
*ಹಾರಂಗಿ ಜಲಾಶಯದ ನೀರಿನ ಮಟ್ಟ*
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2849.22 ಅಡಿಗಳು. ಕಳೆದ ವರ್ಷ ಇದೇ ದಿನ 2828.25 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 13.80 ಮಿ.ಮೀ., ಕಳೆದ ವರ್ಷ ಇದೇ ದಿನ 41.40 ಮಿ.ಮೀ., ಇಂದಿನ ನೀರಿನ ಒಳಹರಿವು 7888 ಕ್ಯುಸೆಕ್, ಕಳೆದ ವರ್ಷ ಇದೇ ದಿನ 366 ಕ್ಯುಸೆಕ್., ಇಂದಿನ ನೀರಿನ ಹೊರ ಹರಿವು ನದಿಗೆ 12166 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 200 ಕ್ಯುಸೆಕ್.










