
ಮಡಿಕೇರಿ ಜು.2 NEWS DESK : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಿಷನ್ ಶಕ್ತಿ ಯೋಜನೆಯಡಿ ಸಮಗ್ರ ಮಹಿಳಾ ಸಬಲೀಕರಣ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ. ಮಿಷನ್ ಶಕ್ತಿ ಯೋಜನೆಯಡಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಮಧ್ಯಸ್ಥಿಕೆ ಕ್ರಮ ಬಲಪಡಿಸುವ ಗುರಿ ಹೊಂದಿದೆ. ಅದರಲ್ಲಿ ಮಿಷನ್ ಶಕ್ತಿಯು ಒನ್ ಸ್ಟಾಪ್ ಸೆಂಟರ್ ಮಹಿಳಾ ಸಹಾಯವಾಣಿ, ಬೇಟಿ ಬಚಾವೋ, ಬೇಟಿ ಪಡಾವೋ ಜೊತೆಗೆ ಮಹಿಳಾ ಸಬಲೀಕರಣ, ಮಾತೃವಂದನಾ ಯೋಜನೆ, ಸಖೀ ನಿವಾಸ್(ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ), ಶಿಶು ಪಾಲನಾ ಕೇಂದ್ರ ಒಳಗೊಂಡಿದೆ. ಜಿಲ್ಲೆಯಲ್ಲಿ ಸಖೀ ಒನ್ ಸ್ಟಾಪ್ ಸೆಂಟರ್‍ನಡಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಮತ್ತು ಪೊಲೀಸ್ ನೆರವು, ಆಪ್ತ ಸಮಾಲೋಚನೆ, ಕಾನೂನು ಸಲಹೆ, ತಾತ್ಕಾಲಿಕ ವಸತಿ ಕಲ್ಪಿಸುವುದು, ತುರ್ತು ಸೇವೆ ಪಡೆಯಲು ಮಹಿಳಾ ಸಹಾಯವಾಣಿ 181 ನ್ನು ಸಂಪರ್ಕಿಸುವುದು ಮತ್ತಿತರ ಒಳಗೊಂಡಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯನ್ನು ದೇಶದಲ್ಲಿ ಇಳಿಕೆಯಾಗುತ್ತಿರುವ ಮಕ್ಕಳ ಲಿಂಗಾನುಪಾತ ಹಾಗೂ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರಿಯಾಗಿ ಇಟ್ಟುಕೊಂಡು ಆರಂಭಿಸಲಾಗಿದೆ.
ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಪ್ರತಿಶತ ಸುಧಾರಣೆ, ಮೊದಲ ಮೂರು ತಿಂಗಳಲ್ಲಿ ಶೇ.1 ರಷ್ಟು ವೃದ್ಧಿ, ಪ್ರಸವ ಪೂರ್ವ ಆರೈಕೆ ನೋಂದಣಿ, ಮಾಧ್ಯಮಿಕ ಶಿಕ್ಷಣ ಮಟ್ಟ ಮತ್ತು ಕೌಶಲ್ಯ ಅಭಿವೃದ್ಧಿಗೆ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ದಾಖಲಾತಿಯಲ್ಲಿ ವೃದ್ಧಿ, ಮಾಧ್ಯಮಿಕ ಶಿಕ್ಷಣ ಮತ್ತು ಪ್ರೌಢಶಾಲಾ ಮಟ್ಟದಲ್ಲಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸದಂತೆ ಜಾಗೃತಿ ಮೂಡಿಸುವುದು, ಆರೋಗ್ಯ ಸುರಕ್ಷತೆ, ನೈರ್ಮಲ್ಯ ನಿರ್ವಹಣೆ ಅರಿವು ಮೂಡಿಸುವುದು ಮತ್ತಿತರ ಕಾರ್ಯಕ್ರಮ ಒಳಗೊಂಡಿದೆ. ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ಹಲವು ಹಂತದಲ್ಲಿ ಬಲವರ್ಧನೆ ಮತ್ತು ಸಮನ್ವಯತೆ ಮುಖಾಂತರ ಮಹಿಳೆಯರಿಗೆ ಲಭ್ಯವಿರುವ ಹಲವಾರು ಸರ್ಕಾರಿ ಸೇವೆಗಳಿಗೆ ಪ್ರವೇಶ ಅವಕಾಶ ಸುಧಾರಿಸುವುದು ಆಗಿದೆ. ಈ ಯೋಜನೆಯಡಿ ಮಹಿಳೆಯರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಅಭಿವೃದ್ಧಿ ಮತ್ತು ಸಬಲೀಕರಣ ಗುರಿ ಹೊಂದಿದೆ. ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಗರ್ಭಿಣಿ, ಬಾಣಂತಿಯರ ಮತ್ತು ಮಗುವಿನ ಆರೋಗ್ಯದಲ್ಲಿ ಸುಧಾರಣೆ ತರಲು ಪ್ರೋತ್ಸಾಹಧನ ನೀಡುವುದಾಗಿದೆ. ಸಖೀ ನಿವಾಸ್ ಯೋಜನೆಯಡಿ ಉದ್ಯೋಗಸ್ಥ ಮಹಿಳೆಯರಿಗೆ ಮತ್ತು ಉದ್ಯೋಗಕ್ಕಾಗಿ ತರಬೇತಿ ಪಡೆಯುತ್ತಿರುವ ಮಹಿಳೆಯರಿಗೆ ಕಡಿಮೆ ಬೆಲೆಯಲ್ಲಿ ಹಾಗೂ ಸುಶಿಕ್ಷಿತವಾದ ವಸತಿ ಒದಗಿಸುವುದು ಈ ಯೋಜನೆ ಜಾರಿಗೊಳಿಸಲಾಗಿದೆ. ಶಕ್ತಿ ಸದನ ಯೋಜನೆಯಡಿ ಸ್ವಾಧಾರ ಗೃಹ ಮತ್ತು ಉಜ್ವಲ ಯೋಜನೆಯನ್ನು ವಿಲೀನಗೊಳಿಸಿ ಈ ಯೋಜನೆ ಜಾರಿಗೆ ತರಲಾಗಿದೆ. ಸ್ವಾಧಾರ ಗೃಹ ಯೋಜನೆಯು ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ಆಶ್ರಯ, ತರಬೇತಿ ಹಾಗೂ ಶಿಕ್ಷಣ ನೀಡುವುದರ ಮೂಲಕ ಆರ್ಥಿಕ ಹಾಗೂ ಸಾಮಾಜಿಕ ಸಶಕ್ತರನ್ನಾಗಿ ಮಾಡುವುದಾಗಿದೆ. ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆಗಾಗಿ ಸಮಸ್ಯೆಗಳಿದ್ದಲ್ಲಿ 1098 ಗೆ ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಮೂರ್ತಿ ವಿವರಿಸಿದ್ದಾರೆ.









