ವಿರಾಜಪೇಟೆ, NEWS DESK ನ.10: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನ ವಿರಾಜಪೇಟೆ ತಾಲೂಕು, ಮಾಯಮುಡಿ ವಲಯದ ವತಿಯಿಂದ ಮಡಿಕೆಬೀಡಿನ ಬಿಂದು ಅವರ ಮನೆಯ ಆವರಣದಲ್ಲಿ ತಂತ್ರಜ್ಞಾನ ಆಧಾರಿತ ಕೃಷಿ ಮಾರುಕಟ್ಟೆ ಕುರಿತು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ ಪ್ರಧಾನ ಸಂಚಾಲಕರಾದ ವಿ.ಎಸ್.ಬಿ. ಭಾಗ್ಯಲಕ್ಷ್ಮಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ರೈತರು ಕೃಷಿ ಮಾರುಕಟ್ಟೆಯಲ್ಲಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ತಮ್ಮ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಹಾಗೂ ಸೂಕ್ತ ಬೆಲೆ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.
ರೈತರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿರುವ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯ ಬಗ್ಗೆಯೂ ಮಾಹಿತಿ ನೀಡಿದರು. ಕೃಷಿ ಚಟುವಟಿಕೆಗಳಲ್ಲಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮುಖ್ಯ ಮಾರುಕಟ್ಟೆ ಪ್ರಾಂಗಣ, ಉಪಮಾರುಕಟ್ಟೆ ಪ್ರಾಂಗಣ ಮತ್ತು ಮಾರುಕಟ್ಟೆ ಉಪಪ್ರಾಂಗಣಗಳಲ್ಲಿ ಉತ್ಪನ್ನಗಳ ಮಾರಾಟ ಚಟುವಟಿಕೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿ ಸಾವು ಅಥವಾ ಅಂಗವೈಕಲ್ಯ ಉಂಟಾದರೆ, ಅಂತಹ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮೂಲಕ ರೈತರಿಗೆ ಲಭ್ಯವಿರುವ ವಿವಿಧ ಸೌಲಭ್ಯಗಳು, ಮಾರುಕಟ್ಟೆ ವ್ಯವಸ್ಥೆ ಹಾಗೂ ತಂತ್ರಜ್ಞಾನ ಆಧಾರಿತ ಕೃಷಿ ಮಾರುಕಟ್ಟೆಯ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಮಾರುಕಟ್ಟೆ ವ್ಯವಸ್ಥಾಪಕರಾದ ಎಸ್. ಮಂಜುನಾಥ್, ಒಕ್ಕೂಟದ ಅಧ್ಯಕ್ಷೆ ಮೀನಾಕ್ಷಿ, ಕೃಷಿ ಮೇಲ್ವಿಚಾರಕರಾದ ವಸಂತ್, ಸೇವಾಪ್ರತಿನಿಧಿ ಪುಷ್ಪ, ವಿಎಲ್ಇ ಕಾವ್ಯ, ಪ್ರಗತಿಪರ ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮವು ರೈತರಿಗೆ ಆಧುನಿಕ ಕೃಷಿ ಮಾರುಕಟ್ಟೆ ವ್ಯವಸ್ಥೆಗಳು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ಕುರಿತು ಅರಿವು ಮೂಡಿಸುವಲ್ಲಿ ಸಹಕಾರಿಯಾಯಿತು.























