ಮೈಸೂರು ಜು.3 NEWS DESK : ನಾಡ ದೇವತೆ ಚಾಮುಂಡೇಶ್ವರಿ ತಾಯಿಯನ್ನು ಆಷಾಢ ಶುಕ್ರವಾರದಂದು ದರ್ಶನ ಮಾಡಲು ಬರುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಯಾವುದೇ ಲೋಪ-ದೋಷಗಳು ಕಂಡುಬರಬಾರದು ಎಂದು ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಕೈಗೊಂಡಿರುವ ಸಿದ್ಧತೆಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಸಂಸದ ಯದುವೀರ್ ಒಡೆಯರ್ ಮಾತನಾಡಿದರು. ಮೊದಲ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಭಕ್ತರಿಗೆ ಸಾಕಷ್ಟು ಅನನುಕೂಲವಾಗಿರುವ ಬಗ್ಗೆ ನಮ್ಮ ಕಚೇರಿಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಆಗಮಿಸಿ, ಸಿದ್ಧತೆಗಳು ಹಾಗೂ ಭಕ್ತರಿಗೆ ಮಾಡಲಾಗಿರುವ ವ್ಯವಸ್ಥೆಯನ್ನು ಪರಿಶೀಲಿಸಲಾಯಿತು. ಕೆಲವೊಂದು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು. :: ದರ ಪರಿಷ್ಕರಣೆ ಬಗ್ಗೆ ಸೂಕ್ತ ನಿರ್ಧಾರ :: ಪ್ರಮುಖವಾಗಿ ವಿಶೇಷ ದರ್ಶನಕ್ಕೆ ಎರಡು ಸಾವಿರ ರೂಪಾಯಿ ನಿಗದಿ ಮಾಡಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಭಕ್ತರಿಗೆ ಕಡಿಮೆ ದರ ನಿಗದಿ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಸದರು ಸ್ಪಷ್ಟಪಡಿಸಿದರು. ಬೆಟ್ಟದ ಮೇಲೆ ಕೆಮಿಕಲ್‌ಯುಕ್ತ ಅರಿಶಿನ-ಕುಂಕುಮ ಮಾರಾಟ ಮಾಡುತ್ತಿರುವ ಬಗ್ಗೆಯೂ ಗಮನ ಹರಿಸಲಾಗಿದೆ. ಪ್ಲಾಸ್ಟಿಕ್ ಮುಕ್ತ ಮಾಡಿದಂತೆ ಬೆಟ್ಟದ ಮೇಲಿರುವ ಎಲ್ಲ ಅಂಗಡಿಗಳು ರಾಸಾಯನಿಕೇತರ ಹಾಗೂ ಸಾವಯವ ಅರಿಶಿನ ಕುಂಕುಮವನ್ನು ಕಡ್ಡಾಯವಾಗಿ ಮಾರಾಟ ಮಾಡಬೇಕು ಎಂದು ನಿರ್ದೇಶಿಸಲಾಗಿದೆ ಎಂದು ಯದುವೀರ್ ಮಾಹಿತಿ ನೀಡಿದರು. :: ದೇಗುಲದಲ್ಲಿ ಮೊಬೈಲ್ ಬ್ಯಾನ್ ಚಿಂತನೆ :: ತಿರುಪತಿ ಮಾದರಿಯಲ್ಲಿ ನಮ್ಮ ಚಾಮುಂಡಿ ಬೆಟ್ಟದಲ್ಲಿಯೂ ಮೊಬೈಲ್ ಫೋನ್ ಹಾಗೂ ಇತರೆ ವಿದ್ಯುನ್ಮಾನ ಸಾಧನಗಳನ್ನು ನಿಷೇಧ ಮಾಡಬೇಕು ಎಂಬುದು ಆಶಯವಾಗಿದೆ. ಈ ನಿಟ್ಟಿನಲ್ಲಿ ಅತಿ ಶೀಘ್ರದಲ್ಲೇ ನಿರ್ಧಾರ ಹೊರಬೀಳಲಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು. ದೇವಿಯ ಫೋಟೋವನ್ನು ಯಾರು ಮೊಬೈಲ್‌ನಲ್ಲಿ ತೆಗೆಯಬಾದು. ಕೆಲವರಿಗೆ ಚಾಮುಂಡಿ ತಾಯಿಯ ಫೋಟೊವನ್ನು ಮೊಬೈಲ್‌ನಲ್ಲಿ ಇಟ್ಟುಕೊಳ್ಳಬೇಕೆಂಬ ಆಸೆ ಇರುತ್ತದೆ. ಇವರಿಗೆ ಫೋಟೋಗಳು ಬೇರೆ ರೀತಿಯಲ್ಲಿ ಸಿಗುವಂತೆ ಮಾಡಲಾಗುವುದು ಎಂದು ಸಂಸದರು ವಿವರಿಸಿದರು. :: ವಸ್ತ್ರ ಸಂಹಿತೆಗೆ ಬೆಂಬಲ :: ಅದೇ ರೀತಿ ವಸ್ತ್ರ ಸಂಹಿತೆಯನ್ನು ಜಾರಿಗೆ ತರಬೇಕಾಗಿದೆ. ವಸ್ತ್ರ ಸಂಹಿತೆಯನ್ನು ಜಾರಿಗೆ ತರುವ ನಿರ್ಧಾರಕ್ಕೆ ನ್ನ ಬೆಂಬಲ ಸದಾ ಇದ್ದೇ ಇದೆ. ನಮ್ಮ ಸಂಸ್ಕೃತಿ, ಸಂಪ್ರದಾಯ, ಪದ್ಧತಿಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ. ದೇಗುಲ ಬರಬೇಕಾದಾಗ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಇದು ಪಾಲಿಸಬೇಕು ಎಂಬುದು ನಮ್ಮಲ್ಲಿಯೇ ಬರಬೇಕು, ಧಾರ್ಮಿಕ ಸ್ಥಳಕ್ಕೆ ಹೇಗೆ ಬರಬೇಕೋ ಅದೇ ರೀತಿ ಜನರು ಬರಬೇಕು. ಇದು ಧಾರ್ಮಿಕ ರಕ್ಷಣೆಗೂ ಸಹಕಾರಿಯಾಗಲಿದೆ ಎಂದು ಸಂಸದರು ವಿವರಿಸಿದರು. ಬೆಟ್ಟದ ಮೇಲಿರುವ ಜಾಗದ ಮಿತಿಯನ್ನು ಎಲ್ಲರೂ ತಿಳಿದುಕೊಳ್ಳಬೇಕು. ಅನ್ನದಾಸೋಹ, ಪಾರ್ಕಿಂಗ್ ವಿಚಾರದಲ್ಲಿ ಜನರು ಕೂಡ ಅರ್ಥ ಮಾಡಿಕೊಳ್ಳಬೇಕು. ಅನ್ನ ದಾಸೋಹ ಮಾಡಬೇಕು ಎನಿಸುವವರು ಆಡಳಿತಾಧಿಕಾರಿಗಳ ಅನುಮತಿ ಪಡೆದು, ಸೂಕ್ತ ಹಾಗೂ ನಿಗದಿತ ಸ್ಥಳದಲ್ಲಿ ಅನ್ನದಾಸೋಹ ಮಾಡಬೇಕು ಎಂದು ಸಲಹೆ ನೀಡಿದರು. :: ಮಲೈಮಹದೇಶ್ವರ ಹುಲಿ ಸಾವು ಪ್ರಕರಣ ಖಂಡನೀಯ :: ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚಿಗಿನ ಹುಲಿಗಳ ಸಾವು ಹಾಗೂ ಕೋತಿಗಳ ಮಾರಣ ಹೋಮ ಘಟನೆಗಳು ಖಂಡನೀಯ. ಹುಲಿಗಳ ಸಂರಕ್ಷಣೆಯಾಗಬೇಕಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು ಹಾಗೂ ನಮ್ಮ ವನ ಸಂಪತ್ತು ಹೆಚ್ಚಿಸಬೇಕಾದ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಯದುವೀರ್ ಒಡೆಯರ್ ತಿಳಿಸಿದರು.












